
ಬೆಂಗಳೂರು, ನ. ೨೧- ನಾನು ಬ್ಲೂಫಿಲಂ ತೋರಿಸಿದ್ದನ್ನು ಸಾಬೀತು ಮಾಡಿದರೆ ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸವಾಲು ಹಾಕಿದ್ದಾರೆ.
ಡಿ.ಕೆ. ಶಿವಕುಮಾರ್ ಅವರು ಹಿಂದೆ ಟೆಂಟ್‌ನಲ್ಲಿ ಬ್ಲೂಫಿಲಂ ತೋರಿಸಿ ಜೀವನ ಮಾಡಿಕೊಂಡು ಬಂದವರು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅವರು, ಕನಕಪುರ, ದೊಡ್ಡಆಲಹಳ್ಳಿ, ಸಾತನೂರು ಈ ಭಾಗದಲ್ಲಿ ಯಾರಾದರೂ ಒಬ್ಬರು, ಇಲ್ಲ ಜೆಡಿಎಸ್ ಕಾರ್ಯಕರ್ತರು ಯಾರಾದರೂ ಒಬ್ಬರು ನಾನು ಬ್ಲೂಫಿಲಂ ತೋರಿಸಿದ್ದೀನಿ ಎಂದು ಹೇಳಿದರೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈ ರೀತಿ ಮಾತನಾಡುವುದಕ್ಕೆ ಅವರಿಗೆ ನಾಚಿಕೆಯಾಗಬೇಕು. ಈ ಹಿಂದೆ ಅವರು ನನ್ನ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಹಾಗೆಯೇ ಮಾಜಿ ಪ್ರಧಾನಿ ದೇವೇಗೌಡರು ಕನಕಪುರದಿಂದ ಲೋಕಸಭೆಗೆ ಸ್ಪರ್ಧಿಸಿದ್ದರು. ಆ ಸಂದರ್ಭದಲ್ಲಿ ಬ್ಲೂಫಿಲಂ ತೋರಿಸಿರುವ ಬಗ್ಗೆ ಹೇಳಬೇಕಿತ್ತು. ಆಗ ಗೊತ್ತಾಗುತ್ತಿತ್ತು ಎಂದು ಕಿಡಿಕಾರಿದರು.
ನಾನು ಇಂದಿರಾಗಾಂಧಿ ಹೆಸರಿನಲ್ಲಿ ಥಿಯೇಟರ್ ಮಾಡಿದ್ದೆ. ಅಲ್ಲಿ ಬ್ಲೂಫಿಲಂ ತೋರಿಸುತ್ತಿದ್ದೆ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ. ಕನಕಪುರದ ಜನ ನಾನು ಆ ಕೆಲಸ ಮಾಡುತ್ತಿದ್ದೆ ಎಂದು ಹೇಳಲಿ, ನೋಡೋಣ. ಆಗ ಅದನ್ನು ಒಪ್ಪಬಹುದು. ಕುಮಾರಸ್ವಾಮಿ ಮಾತಿಗೆಲ್ಲಾ ನಾನು ತಲೆಕೆಡಿಸಿಕೊಳ್ಳಲ್ಲ. ಅವರಿಗೆ ಯಾವುದೋ ಸಮಸ್ಯೆ ಇದ್ದಂತಿದೆ ಎಂದು ವ್ಯಂಗ್ಯವಾಡಿದರು.
ಕುಮಾರಸ್ವಾಮಿ ಹತಾಶರಾಗಿದ್ದಾರೆ. ಮಾಜಿ ಮುಖ್ಯಮಂತ್ರಿಯಾಗಿ ಅವರು ಘನತೆ, ಗೌರವವನ್ನು ಉಳಿಸಿಕೊಳ್ಳಬೇಕು. ಹೀಗೆ ಏನೇನೋ ಮಾತನಾಡುತ್ತಾ ಹೋದರೆ ಜನ ಅವರನ್ನು ನೋಡಿ ನಗುತ್ತಾರೆ ಅಷ್ಟೇ ಎಂದರು.
ಈ ರೀತಿಯ ಹೇಳಿಕೆಗಳಿಂದ ಜನ ನಗುತ್ತಾರೆ, ನಿಮ್ಮ ಗೌರವ ಹಾಳಾಗುತ್ತದೆ. ಇದರಿಂದ ನಿಮಗೆ ಒಳ್ಳೆಯದಾಗಲ್ಲ ಎಂದು ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು,