ಬ್ಲಾಕ್ ಫಂಗಸ್ ಚಿಕಿತ್ಸೆ ಕೇಂದ್ರ ಆರಂಭ

ಬೆಂಗಳೂರು ,ಮೇ ೧೭- ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾಗಿರುವವರಲ್ಲಿ ಕಾಣಿಸಿಕೊಳ್ಳುತ್ತಿರುವ ಬ್ಲಾಕ್ ಫಂಗಸ್ ರೋಗದ ನಿಯಂತ್ರ
ಣಕ್ಕೆ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇಂದು ತಜ್ಞರ ಜತೆ ಸಭೆ ನಡೆಸಿ ಚಿಕಿತ್ಸೆಗೆ ಕೇಂದ್ರಗಳನ್ನು ಆರಂಭಿಸುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು.
ಬ್ಲಾಕ್ ಫಂಗಸ್ ರೋಗದ ಚಿಕಿತ್ಸೆ ಬಗ್ಗೆ ತೀರ್ಮಾನಿಸಲು ಈಗಾಗಲೇ ಕಣ್ಣು ಮತ್ತು ದಂತ ವೈದ್ಯರ ತಜ್ಞರ ಸಮಿತಿಯನ್ನು ರಚಿಸಲಾಗಿದೆ. ಇಂದು ಈ ಸಮಿತಿಯ ಜತೆ ಸಭೆ ನಡೆಸಿ ಯಾವ ರೀತಿ ರೋಗವನ್ನು ನಿಯಂತ್ರಣ ಮಾಡಬೇಕು. ಚಿಕಿತ್ಸೆಗೆ ರಾಜ್ಯದಲ್ಲಿ ಎಷ್ಟು ಕೇಂದ್ರ ಸ್ಥಾಪಿಸಬೇಕು ಎಂಬ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.
ಔಷಧಿ ಕೊರತೆ, ಸರಬರಾಜು ಬಗ್ಗೆಯೂ ಚರ್ಚೆಗಳು ನಡೆಯುತ್ತವೆ. ಈಗಾಗಲೇ ಕೇಂದ್ರ ಸರ್ಕಾರಕ್ಕೆ ಬ್ಲಾಕ್ ಫಂಗಸ್ ರೋಗಕ್ಕೆ ಅಗತ್ಯವಾದ ಔಷಧಿ, ಇಂಜೆಕ್ಷನ್ ಪೂರೈಸುವಂತೆ ಮನವಿ ಮಾಡಿದ್ದೇವೆ ಎಂದು ಅವರು ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ಲಸಿಕೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ವಿದೇಶಗಳಿಗೆ ಔಷಧಿ ನೀಡಿದ್ದರ ಬಗ್ಗೆ ಟ್ವಿಟರ್ ಅಭಿಯಾನ ನಡೆಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಕೇಂದ್ರಸರ್ಕಾರ ಮಾನವೀಯತೆಯಿಂದ ಉಚಿತವಾಗಿ ಬೇರೆ ದೇಶಗಳಿಗೆ ಲಸಿಕೆ ಕೊಟ್ಟಿದೆ. ಲಸಿಕೆಯನ್ನು ಮಾರಾಟ ಮಾಡಿಲ್ಲ ಎಂದರು.
ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ರಾಜಕಾರಣ ಮಾಡುತ್ತಿರುವುದು ಖೇದ ಉಂಟು ಮಾಡಿದೆ. ಈ ಸಂದರ್ಭದಲ್ಲಿ ರಾಜಕಾರಣ ಮಾಡದೆ ಸರ್ಕಾರದ ಜತೆ ಕೈ ಜೋಡಿಸುವ ಬದ್ಧತೆಯನ್ನು ಕಾಂಗ್ರೆಸ್ ತೋರಿಸಬೇಕಿತ್ತು ಎಂದು ಅವರು ಹೇಳಿದರು.
ಗ್ರಾಮೀಣ ಭಾಗದಲ್ಲಿ ಹರಡುತ್ತಿರುವ ಸೋಂಕನ್ನು ನಿಯಂತ್ರಿಸಲು ಹೋಂ ಐಸೋಲೇಷನ್ ಬದಲು ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಿಸುವುದನ್ನಿ ಕಡ್ಡಾಯ ಮಾಡಿದ್ದೇವೆ. ಇದರಿಂದ ಸೋಂಕು ನಿಯಂತ್ರಣಕ್ಕೆ ಬರುತ್ತದೆ. ಹಳ್ಳಿಗಳಲ್ಲಿ
ಪ್ರತ್ಯೇಕವಾಗಿ ಇರಲು ವ್ಯವಸ್ಥೆ ಇರುವುದಿಲ್ಲ. ಮನೆಯಲ್ಲಿರುವವರು ಸರಿಯಾಗಿ ಔಷಧಗಳನ್ನು ತೆಗೆದುಕೊಳ್ಳುವುದಿಲ್ಲ. ಇದನ್ನು ತಪ್ಪಿಸಲು ಹೋಂ ಐಸೋಲೇಷನ್ ರದ್ದು ಮಾಡಿದ್ದೇವೆ ಎಂದರು.
ಲಾಕ್‌ಡೌನ್ ವಿಸ್ತರಣೆ ಸಂಬಂಧ ಮುಖ್ಯಮಂತ್ರಿಗಳು ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಅವರು ಹೇಳಿದರು.
ಲಸಿಕೆ ಸಂಬಂಧ ಭಾರತ್ ಬಯೋಟೆಕ್ ಮುಖ್ಯಸ್ಥರೊಂದಿಗೆ ಮಾತನಾಡಿದ್ದೇನೆ. ಆದ್ಯತೆ ಮೇರೆಗೆ ಲಸಿಕೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಈಗ ಭಾರತ್ ಬಯೋಟೆಕ್ ೧ ಕೋಟಿ ಡೋಸ್ ಮಾತ್ರ ಉತ್ಪಾದನೆ ಮಾಡುತ್ತಿದೆ. ಮಾಲೂರಿನಲ್ಲಿ ಉತ್ಪಾದನೆ ಆರಂಭಿಸಿದರೆ ಜೂನ್ ಅಂತ್ಯಕ್ಕೆ ೧ ಕೋಟಿ, ಜುಲೈನಲ್ಲಿ ೨ ರಿಂದ ೩ ಕೋಟಿ, ಆಗಸ್ಟ್‌ನಲ್ಲಿ ೪ ರಿಂದ ೫ ಕೋಟಿ ಡೋಸ್ ಉತ್ಪಾದನೆಯಾಗುತ್ತದೆ ಎಂದು ಹೇಳಿದ್ದಾರೆ.
ಕರ್ನಾಟಕಕ್ಕೆ ಪ್ರಾಶಸ್ತ್ಯದಲ್ಲಿ ಲಸಿಕೆ ಕೊಡುವುದಾಗಿ ಭರವಸೆ ಕೊಟ್ಟಿದ್ದಾರೆ. ಷೆಡ್ಯೂಲ್ ನೀಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಅಧಿಕಾರಿಗಳ ನೇಮಕ ಮಾಡಿ ಆದಷ್ಟು ಬೇಗ ಜನರಿಗೆ ಲಸಿಕೆ ಕೊಡುವ ಕೆಲಸ ಮಾಡುತ್ತೇವೆ ಎಂದರು.
ಫಿಲಂ ಛೇಂಬರ್‌ನಿಂದ ಚಿತ್ರರಂಗದಲ್ಲಿರುವ ೭-೮ ಸಾವಿರ ಕಾರ್ಮಿಕರು, ಕಲಾವಿದರು, ತಾಂತ್ರಿಕ ವರ್ಗದವರು ಎಲ್ಲರಿಗೂ ಲಸಿಕೆ ನೀಡುವಂತೆ ಮನವಿ ಮಾಡಿದ್ದಾರೆ. ಪ್ರತ್ಯೇಕವಾಗಿ ಸಿನಿಮಾದವರಿಗೆ ಲಸಿಕೆ ನೀಡುವ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಜತೆ ಮಾತನಾಡಿ ಮುಂದಿನ ತೀರ್ಮಾನ ಮಾಡುವುದಾಗಿ ಸಚಿವ ಡಾ. ಕೆ. ಸುಧಾಕರ್ ಅವರು ಹೇಳಿದರು.