ಬ್ಲಾಕ್ ಫಂಗಸ್ ಚಿಕಿತ್ಸೆಗೆ ತಜ್ಞವೈದ್ಯರ ಪ್ರತ್ಯೇಕ ತಂಡ

ಬಳ್ಳಾರಿ ಮೇ 30 : ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಅಬ್ಬರಿಸುತ್ತಿದ್ದ ಕೋವಿಡ್ ಸೋಂಕಿನಿಂದ ತುಸು ಚೇತರಿಸಿಕೊಳ್ಳುತ್ತಿದ್ದರೂ, `ಬ್ಲಾಕ್ ಫಂಗಸ್’ ಹಾವಳಿ ಹೆಚ್ಚುತ್ತಿದ್ದು, ಈ ಸೋಂಕನ್ನು ನಿಭಾಯಿಸಲು, ಚಿಕಿತ್ಸೆ ನೀಡಲು ವಿಮ್ಸ್‍ನಲ್ಲಿ ಪ್ರತ್ಯೇಕ ವೈದ್ಯರ ತಂಡವನ್ನು ರಚಿಸಲಾಗಿದೆ.
ಜಿಲ್ಲೆಯಲ್ಲಿ ಈವರೆಗೆ 41 ಜನರಲ್ಲಿ ಬ್ಲಾಕ್ ಫಂಗಸ್ ಸೋಂಕು ದೃಢಪಟ್ಟಿದ್ದು, ಹುಬ್ಬಳ್ಳಿ ಸೇರಿ ವಿವಿಧೆಡೆ ಚಿಕಿತ್ಗೆ ಪಡೆಯುತ್ತಿದ್ದಾರೆ. ಬಳ್ಳಾರಿ, ಹೊಸಪೇಟೆ, ಹರಪನಹಳ್ಳಿ, ಹಡಗಲಿ, ಕೂಡ್ಲಿಗಿ ತಾಲೂಕುಗಳಲ್ಲಿ ಈ ಬ್ಲಾಕ್ ಫಂಗಸ್ ಸೋಂಕಿನ ಪ್ರಕರಣಗಳು ಕಂಡುಬಂದಿವೆ. ಹಡಗಲಿ, ಹರಪನಹಳ್ಳಿ ಸೇರಿ ಇತರೆ ತಾಲೂಕುಗಳಲ್ಲಿ ಒಟ್ಟು 6 ಜನರು ಮೃತಪಟ್ಟಿದ್ದಾರೆ. ಹಾಗಾಗಿ ಇದನ್ನು ಎದುರಿಸಲು ವಿಮ್ಸ್ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ವಿಮ್ಸ್‍ನಲ್ಲಿ ತಜ್ಞವೈದ್ಯರ ಪ್ರತ್ಯೇಕ ತಂಡವನ್ನು ರಚಿಸಿದೆ.
ಮೂರು ಹಂತದಲ್ಲಿ ಪತ್ತೆ;
ಕೋವಿಡ್ ಸೋಂಕಿತರಲ್ಲಿ, ಕೋವಿಡ್ ಸೋಂಕಿನಿಂದ ಗುಣಮುಖರಾದವರಲ್ಲಿ ಮತ್ತು ಸ್ಟೀರಾಯ್ಡ್ ಬಳಸುತ್ತಿದ್ದವರಲ್ಲಿ ಈ ಸೋಂಕು ಪತ್ತೆಯಾಗಲಿದೆ. ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗವಲ್ಲವಾದರೂ, ಸೋಂಕಿತರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಲಿದೆ. ಸೋಂಕು ಆವರಿಸಿದ್ದ ರೋಗಿಯ ಗಂಭೀರತೆಯನ್ನು ಆಧರಿಸಿ 6 ರಿಂದ 21 ದಿನಗಳವರೆಗೆ ಚಿಕಿತ್ಸೆ ನೀಡಲಾಗುತ್ತದೆ. ಈ ಸೋಂಕಿಗೆ ನೀಡುವ ಇಂಜೆಕ್ಷನ್ ದುಬಾರಿ ವೆಚ್ಚದ್ದಾಗಿದ್ದು, ಸದ್ಯಕ್ಕೆ ರಾಜ್ಯ ಸರ್ಕಾರವೇ ಪೂರೈಸುತ್ತಿದೆ ಎಂದು ವಿಮ್ಸ್ ನಿರ್ದೇಶಕ ಡಾ. ಗಂಗಾಧರಗೌಡ ತಿಳಿಸಿದ್ದಾರೆ.
ತಜ್ಞವೈದ್ಯರ ತಂಡ ರಚನೆ
ಬ್ಲಾಕ್ ಫಂಗಸ್ ದೃಢಪಟ್ಟ ಸೋಂಕಿತರಿಗೆ ಚಿಕಿತ್ಸೆ ನೀಡಲು ವಿಮ್ಸ್‍ನಲ್ಲಿ ನೆಗೆಟಿವ್ ಮತ್ತು ಪಾಸಿಟಿವ್ ಎಂಬ ಎರಡು ಪ್ರತ್ಯೇಕ ವಾರ್ಡ್‍ಗಳನ್ನು ತೆಗೆಯಲಾಗಿದೆ. ಈ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲು ಮೆಡಿಸಿನ್, ಅನಸ್ತೇಸಿಯಾ, ಆಪ್ತಮಾಲಜಿ, ಇಎನ್‍ಟಿ, ನ್ಯೂರೊ ಸರ್ಜರಿ ಸೇರಿ ಒಟ್ಟು 6 ಜನರ ತಜ್ಞವೈದ್ಯರ ತಂಡವನ್ನು ರಚಿಸಲಾಗಿದೆ. ಈ ಎಲ್ಲ ವಿಭಾಗಗಳಿಗೆ ಸಂಬಂಧಿಸಿದಂತೆ ಸೋಂಕಿತರಲ್ಲಿ ಲಕ್ಷಣಗಳು ಕಾಣಿಸಲಿವೆ. ಕೆಲವೊಮ್ಮೆ ಸರ್ಜರಿ ಮಾಡುವ ಅವಶ್ಯಕತೆಯೂ ಬರಬಹುದು. ಹಾಗಾಗಿ ಈ ಎಲ್ಲ ವಿಭಾಗಗಳ ತಜ್ಞವೈದ್ಯರ ತಂಡವನ್ನು ರಚಿಸಿ, ಸೋಂಕಿತರಿಗೆ ಸ್ಥಳೀಯವಾಗಿಯೇ ಸೂಕ್ತ ಚಿಕಿತ್ಸೆ ನೀಡಲು ಸಿದ್ಧತೆ ನಡೆಸಲಾಗಿದೆ
ಇಂಜೆಕ್ಷನ್ ಕೊರತೆ;
ಬ್ಲಾಕ್‍ಫಂಗಸ್ ಸೋಂಕಿತರಿಗೆ ನೀಡುವ ಇಂಜೆಕ್ಷನ್‍ಗಳ ಕೊರತೆ ಇದೆ. ದುಬಾರಿ ವೆಚ್ಚದ ಈ ಇಂಜೆಕ್ಷನ್‍ಗಳನ್ನು ವಿಮ್ಸ್‍ಗೆ ಸದ್ಯ ಸರ್ಕಾರವೇ ಪೂರೈಸುತ್ತಿದೆ. ಅಗತ್ಯಕ್ಕಿಂತ ಕಡಿಮೆ ಇಂಜಕ್ಷನ್ ಪೂರೈಕೆಯಾಗಿದ್ದು ಇನ್ನಷ್ಟು ಇಂಜೆಕ್ಷನ್‍ಗಳನ್ನು ಕಳುಹಿಸುವಂತೆ ಸರ್ಕಾರವನ್ನು ಕೋರಲಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.