ಬ್ಲಾಕ್ ಫಂಗಸ್ ಘೋಷಣೆಗೆ ಹೆಚ್‌ಡಿಕೆ ಒತ್ತಾಯ


ಬೆಂಗಳೂರು,ಮೇ ೨೧- ಬ್ಲಾಕ್ ಫಂಗಸ್‌ನ್ನು(ಕಪ್ಪು ಶಿಲೀಂದ್ರ) ಸಾಂಕ್ರಾಮಿಕ ರೋಗ ಎಂದು ಘೋಷಿಸುವಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಸಂಬಂದ ಟ್ವೀಟ್ ಮಾಡಿರುವ ಅವರು, ತೆಲಂಗಾಣ, ತಮಿಳುನಾಡು, ರಾಜಸ್ತಾನ, ಗುಜರಾತ್, ಒಡಿಶಾ, ಹರಿಯಾಣದಲ್ಲಿ ಬ್ಲಾಕ್ ಫಂಗಸ್‌ನ್ನು ಸಾಂಕ್ರಾಮಿಕ ಎಂದು ಘೋಷಿಸಲಾಗಿದೆ. ಕೇಂದ್ರವು ಈ ಬಗ್ಗೆ ಸೂಚನೆ ನೀಡಿದೆ. ಹಾಗಾಗಿ, ರಾಜ್ಯವು ಈ ಮಾರಕ ಕಾಯಿಲೆಯನ್ನು ಕೂಡಲೇ ಸಾಂಕ್ರಾಮಿಕ ಎಂದು ಘೋಷಿಸಬೇಕು ಎಂದವರು ಟ್ವಿಟರ್‌ನಲ್ಲಿ ಆಗ್ರಹಿಸಿದ್ದಾರೆ.
ಸಾಂಕ್ರಾಮಿಕ ರೋಗಗಳ ನಿರ್ವಹಣೆ ವಿಚಾರದಲ್ಲಿ ರಾಜ್ಯಸರ್ಕಾರ ತೋರುತ್ತಿರುವ ಆಲಸ್ಯ ಸರಿಯಲ್ಲ, ಕಪ್ಪು ಶಿಲೀಂದ್ರ ರೋಗದ ನಿರ್ವಹಣೆಯಲ್ಲಿ ಎಡವುತ್ತಿರುವುದು ಕಾಣಿಸುತ್ತಿದೆ. ರೋಗದ ಚಿಕಿತ್ಸೆಗೆ ಅಗತ್ಯವಿರುವ ಔಷಧಗಳ ದಾಸ್ತಾನು ಹೊಂದದೆ ಇರುವುದು, ಅಗತ್ಯ ಪ್ರಮಾಣದ ಔಷಧವನ್ನು ಕೇಳಿ ಪಡೆದುಕೊಳ್ಳದೇ ಇರುವುದು ಇದಕ್ಕೆ ಸಾಕ್ಷಿ ಎಂದರು.
ಕೋವಿಡ್‌ನಿಂದ ಗುಣಮುಖರಾದವರಿಗೆ ಹೆಚ್ಚಾಗಿ ಕಪ್ಪು ಶಿಲೀಂದ್ರ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿವೆ. ಹಾಗಾಗಿ, ಕಪ್ಪು ಶಿಲೀಂದ್ರ ರೋಗವು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುವ ಅಪಾಯವಿದೆ. ಇದನ್ನು ಸಾಂಕ್ರಾಮಿಕ ಎಂದು ಘೋಷಿಸಿ, ಚಿಕಿತ್ಸಗೆ ಅಗತ್ಯ ಔಷಧಿ ಮತ್ತು ತಜ್ಞರನ್ನು ಸನ್ನದ್ಧ ಸ್ಥಿತಿಯಲ್ಲಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ.