ಬ್ಲಾಕ್ ಫಂಗಸ್ ಉಚಿತ ಚಿಕಿತ್ಸೆಗೆ ಸಿದ್ದು ಆಗ್ರಹ


ಬೆಂಗಳೂರು,ಮೇ ೧೭- ಕೊರೊನಾದಿಂದ ಗುಣಮುಖರಾದವರಲ್ಲಿ ಕಾಣಿಸಿಕೊಂಡಿರುವ ಬ್ಲಾಕ್ ಫಂಗಸ್ ರೋಗಕ್ಕೆ ಉಚಿತವಾಗಿ ಚಿಕಿತ್ಸೆ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಬ್ಲಾಕ್ ಫಂಗಸ್ ಕಾಯಿಲೆಯ ಚಿಕಿತ್ಸೆ ದುಬಾರಿಯಾಗಿದೆ. ಜತೆಗೆ ಔಷಧಗಳು ಸಿಗುತ್ತಿಲ್ಲ. ಕಾಳ ಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ. ಹಾಗಾಗಿ, ಬ್ಲಾಕ್ ಫಂಗಸ್ ಕಾಯಿಲೆಯನ್ನು ಅಧಿಕೃತ ರೋಗಗಳ ಪಟ್ಟಿಯಲ್ಲಿ ಸೇರಿಸಿ ಸೂಕ್ತ ಅಧಿಸೂಚನೆ ಹೊರಡಿಸಿ ಉಚಿತವಾಗಿ ಚಿಕಿತ್ಸೆ ಕೊಡಿಸಬೇಕು ಎಂದು ಸರ್ಕಾರವನ್ನು ಅವರು ಒತ್ತಾಯಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋವಿಡ್ ಸಾಂಕ್ರಾಮಿಕವನ್ನು ಅತ್ಯಂತ ಅರಾಜಕವಾಗಿ ನಿರ್ವಹಿಸುತ್ತಿರುವ ಸರ್ಕಾರ, ಸತ್ತವರು ಸಾಯಲಿ ಎಂಬಂತೆ ನಡೆದುಕೊಳ್ಳುತ್ತಿದೆ. ಬ್ಲಾಕ್ ಫಂಗಸ್ ರೋಗದ ಬಗ್ಗೆ ಇನ್ನು ಸಮರ್ಪಕ ನಿರ್ಧಾರವನ್ನೇ ತೆಗೆದುಕೊಂಡಿಲ್ಲ. ಕೂಡಲೇ ಸರ್ಕಾರ ಅಧಿಸೂಚನೆ ಚಿಕಿತ್ಸೆ ನೀಡಲು ಮುಂದಾಗಬೇಕು ಎಂದು ಅವರು ಹೇಳಿದ್ದಾರೆ.
ಬ್ಲಾಕ್ ಫಂಗಸ್ ರೋಗಕ್ಕೆ ತುತ್ತಾಗಿ ಕಣ್ಣುಗಳನ್ನು ಕಳೆದುಕೊಂಡವರಿದ್ದಾರೆ. ಅಂತಹವರಿಗೆ ಪರಿಹಾರ ನೀಡಬೇಕೆಂದ ಅವರು, ಈ ರೋಗ ಅಮೂಲ್ಯ ಜೀವಗಳನ್ನು ಹೊತ್ತೊಯ್ಯುವ ಮೊದಲೇ ಉಚಿತ ಚಿಕಿತ್ಸೆ ನೀಡುವ ಕೆಲಸವನ್ನು ಆರಂಭಿಸಬೇಕು ಹಾಗೂ ಚಿಕಿತ್ಸೆಗೆ ಅಗತ್ಯವಿರುವ ಇಂಜೆಕ್ಷನ್, ಔಷಧಗಳನ್ನು ಕೂಡಲೇ ತರಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.