ಬ್ಲಾಕ್ ಕಾಂಗ್ರೆಸ್ ನಿಂದ ನೆಹರೂ ಜಯಂತಿ ಆಚರಣೆ

ಧಾರವಾಡ ನ 15 : ಧಾರವಾಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ರಾಣಿಚನ್ನಮ್ಮ ಬ್ಲಾಕ್ ಕಾಂಗ್ರೆಸ್ ವತಿಯಿಂದ 131 ನೇ ಜವಾಹರಲಾಲ್ ನೆಹರೂ ಅವರ ಜಯಂತಿಯನ್ನು ಕೇಕ್ ಕತ್ತಿರಿಸುವ ಮೂಲಕ ಆಚರಿಸಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಮಲಕಾರಿ ಅವರು ಮಹಾತ್ಮಾ ಗಾಂಧೀಜಿಯವರ ಜೊತೆಗೂಡಿ ನೆಹರೂರವರು ಭಾರತ ದೇಶವನ್ನು ಬ್ರಿಟಿಷರ ಕಪಿಮುಷ್ಟಿಯಿಂದ ಬಿಡಿಸಿ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಹೋರಾಡಿದ ವೀರ ಮಹನೀಯರು. ಅಷ್ಟೇ ಅಲ್ಲದೇ ಸ್ವಾತಂತ್ರ್ಯ ನಂತರ ಭಾರತ ದೇಶವನ್ನು ಕಾಡುತ್ತಿದ್ದ ಬಡತನ, ನಿರುದ್ಯೋಗ, ಹಣಕಾಸು ಬಿಕ್ಕಟ್ಟು, ಬರಗಾಲ, ಇವುಗಳೆಲ್ಲವನ್ನು ಮೆಟ್ಟಿ ನಿಂತು ಜಗತ್ತೇ ನಿಬ್ಬೆರಗಾಗುವಂತೆ ಆಡಳಿತ ಕೊಟ್ಟ ಕೀರ್ತಿ ಜವಾಹರಲಾಲ್ ನೆಹರೂ ಅವರಿಗೆ ಸಲ್ಲಬೇಕು.
ಅಲ್ಲದೇ ನಾವು ನೋಡುತ್ತಿರುವ ಇವತ್ತಿನ ಈ ಭವ್ಯ ಭಾರತದ ಕಲ್ಪನೆಗೆ ಸಾಕಾರ ಮೂರ್ತಿಗಳು ಅದು ನೆಹರೂರವರು ಎನ್ನುವುದು ಹೆಮ್ಮೆಯ ಸಂಗತಿ. ಹಾಗೆಯೇ ಮಕ್ಕಳ ಮೇಲೆ ವಿಶೇಷ ಪ್ರೀತಿ, ಮಮತೆ ಹೊಂದಿದ್ದ ನೆಹರೂರವರು ತಮ್ಮ ಜನ್ಮದಿನದಂದು ಮಕ್ಕಳ ದಿನಾಚಾರಣೆಯನ್ನಾಗಿ ಆಚರಿಸಲು ಕರೆಕೊಟ್ಟರು.ಹೀಗಾಗಿಯೇ ಇವತ್ತಿಗೂ ನೆಹರೂರವರು ಮಕ್ಕಳ ಪ್ರೀತಿಯ ಚಾಚಾ ನೆಹರೂ ಆಗಿ ಉಳಿದಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಮಕ್ಕಳಿಗೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪೆನ್ ಹಾಗೂ ಪುಸ್ತಕಗಳನ್ನು ಕೊಟ್ಟು, ಚಾಕೊಲೇಟ್ ಕೊಟ್ಟು ಪ್ರೀತಿಯಿಂದ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಸುಬಾಷ ಶಿಂಧೆ ಮಾತನಾಡಿ ನೆಹರೂ ಅವರು ಈ ದೇಶದ ಭದ್ರ ಭವಿಷ್ಯವನ್ನು ಕಟ್ಟಿಕೊಟ್ಟರು ಎಂದರು.
ಜಿಲ್ಲಾ ಒಬಿಸಿ ಅಧ್ಯಕ್ಷ ಹೇಮಂತ ಗುರ್ಲಹೊಸೂರ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಸಂತ ಅರ್ಕಾಚಾರ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಗ್ರೇಗರಿ ಜೇವಿಯರ, ಜಿಲ್ಲಾ ಯುವ ಕುರುಬರ ಸಂಘದ ಅಧ್ಯಕ್ಷ ರಮೇಶ ನಲವಡಿ, ಗೌರಮ್ಮ ನಾಡಗೌಡ, ಮೇಹಬೂಬ ಪಠಾಣ, ಗೌಸ್ ನವಲೂರ, ಸಂಜು ಹಿರೇಮಠ, ಸುಮಿತ್ರಾ ಕೋಟಕರ, ಸುಜನ್ ಕಾಕಿ, ಜಯಶ್ರೀ ದೇಶಮಾನೆ, ಮುಮ್ತಾಜ್ ಹಾನಗಲ್, ಶೇಕಪ್ಪ ಮಲ್ಲಿಗವಾಡ, ಮಾರುತಿ ಭಜಂತ್ರಿ ಸೇರಿದಂತೆ ಮಕ್ಕಳು ಸಂಭ್ರಮದಿಂದ ಆಚರಿಸಿದರು.