ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ರಾಜೀನಾಮೆ
 ಹಡಗಲಿ ಕೈ ಪಾಳೆಯದಲ್ಲಿ ಅಸಮಾಧಾನ ಸ್ಫೋಟ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಫೆ.28 : ಕೆಲ ದಿನಗಳಿಂದ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಅವರೊಂದಿಗೆ ಮುನಿಸಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಮುಂಚೂಣಿ ಘಟಕದ ಪದಾಧಿಕಾರಿಗಳು ನಿನ್ನೆ ದಿಢೀರ್ ರಾಜೀನಾಮೆ ನೀಡಿದ್ದು, ಹೂವಿನಹಡಗಲಿಯ ಕೈ ಪಾಳೆಯದಲ್ಲಿದ್ದ ಆಂತರಿಕ ಭಿನ್ನಾಭಿಪ್ರಾಯ ಇದೀಗ ಬಹಿರಂಗಗೊಂಡಿದೆ.
ಹಡಗಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಪರಮೇಶ್ವರಪ್ಪ, ಇಟ್ಟಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐಗೋಳ ಚಿದಾನಂದ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವಾರದ ಗೌಸ್ ಮೊಹಿದ್ದೀನ್ ಅವರು ಸಾಮೂಹಿಕವಾಗಿ ಕೆಪಿಸಿಸಿಗೆ ರಾಜೀನಾಮೆ ಸಲ್ಲಿಸಿ, ಪ್ರತಿಗಳನ್ನು ಮಾಧ್ಯಮಗಳಿಗೂ ಬಿಡುಗಡೆಗೊಳಿಸಿದ್ದಾರೆ. ಚುನಾವಣಾ ಹೊಸ್ತಿಲಲ್ಲಿ ನಡೆದ ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಯಾವ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇಟ್ಟಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಐಗೋಳ ಚಿದಾನಂದ ಪ್ರತಿಕ್ರಿಯಿಸಿ, ಕಳೆದ 15 ವರ್ಷದಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಈಗ ಹರಪನಹಳ್ಳಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದ್ದು, ಪಕ್ಷ ಯಾರಿಗೇ ಟಿಕೆಟ್ ನೀಡಿದರೂ ಆ ಕ್ಷೇತ್ರದಲ್ಲಿ ಅವರ ಗೆಲುವಿಗಾಗಿ ನಾನು ಶ್ರಮಿಸುತ್ತೇನೆ. ಹಡಗಲಿಯಲ್ಲಿ ಪಕ್ಷದ ಚಟುವಟಿಕೆಗಳಲ್ಲಿ ತೊಡಗಲು ಸಾಧ್ಯವಾಗದ ಕಾರಣ ರಾಜೀನಾಮೆ ಸಲ್ಲಿಸಿರುವೆ ಎಂದು ತಿಳಿಸಿದರು.
ಹಡಗಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಪರಮೇಶ್ವರಪ್ಪ ಪ್ರತಿಕ್ರಿಯಿಸಿ, ಕಳೆದ 20 ವರ್ಷದಿಂದ ಪಕ್ಷ ನನ್ನನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸೀಮಿತಗೊಳಿಸಿತು. ಪಕ್ಷ ನನ್ನನ್ನು ಗುರುತಿಸಿ ಸೂಕ್ತ ಸ್ಥಾನಮಾನ ನೀಡಲಿಲ್ಲ. ಇದರಿಂದ ಬೇಸರಗೊಂಡು ರಾಜೀನಾಮೆ ನೀಡಿರುವೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದ ವಾರದ ಗೌಸ್ ಮೊಹಿದ್ದೀನ್ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಮುಂದುವರಿಯಲಿದ್ದೇನೆ. ಪಕ್ಷದ ಯಾವುದೆ ಹುದ್ದೆಯಲ್ಲಿ ಮುಂದುವರಿಯಲು ಆಸಕ್ತಿ ಇರದ ಕಾರಣ ರಾಜೀನಾಮೆ ಸಲ್ಲಿಸಿರುವೆ ಎಂದು ಹೇಳಿದರು.
ಈ ಮುಖಂಡರು ವೈಯಕ್ತಿಕ ಕಾರಣದಿಂದ ರಾಜೀನಾಮೆ ನೀಡಿರುವುದಾಗಿ ಹೇಳುತ್ತಿದ್ದರೂ ಈ ಬೆಳವಣಿಗೆ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ತೋರಿಸುತ್ತದೆ. ಇತ್ತೀಚಿಗೆ ಹಿರಿಯ ಮುಖಂಡರಾದ ಕೆ.ಸಿ.ಕೊಂಡಯ್ಯ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡೇ ಶಾಸಕ ಪರಮೇಶ್ವರನಾಯ್ಕ ವಿರುದ್ಧ ಬಹಿರಂಗ ಟೀಕೆ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಪಕ್ಷದ ಮುಂಚೂಣಿ ನಾಯಕರು ಹುದ್ದೆ ತೊರೆದಿರುವುದು ಚರ್ಚೆಗೆ ಗ್ರಾಸವಾಗಿದೆ.