ಬ್ಲಾಕ್ ಅಧ್ಯಕ್ಷರಾಗಿ ರವಿ ಅಧಿಕಾರ ಸ್ವೀಕಾರ

ಸಂಜೆವಾಣಿ ನ್ಯೂಸ್
ಮೈಸೂರು: ಮಾ.15:- ಕಾಂಗ್ರೆಸ್‍ನ ಚಾಮರಾಜ ಕ್ಷೇತ್ರದ ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷರಾಗಿ ರವಿ ಮಂಚೇಗೌಡನಕೊಪ್ಪಲು ಅವರು ಗುರುವಾರ ಅಧಿಕಾರ ಸ್ಪೀಕರಿಸಿದರು.
ನಗರದ ರೈಲ್ವೆ ನಿಲ್ದಾಣ ಬಳಿಯಿರುವ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ ಪದಗ್ರಹಣ ಸಮಾರಂಭದಲ್ಲಿ ಶಾಸಕರಾದ ತನ್ವೀರ್ ಸೇಠ್ ಹಾಗೂ ಕೆ.ಹರೀಶ್‍ಗೌಡ ಇಬ್ಬರು ರವಿ ಮಂಚೇಗೌಡನಕೊಪ್ಪಲು ಅವರಿಗೆ ಕಾಂಗ್ರೆಸ್ ಪಕ್ಷದ ಬಾವುಟ ನೀಡಿ ಗೌರವಿಸಿದರು.
ರವಿ ಮಂಚೇಗೌಡನಕೊಪ್ಪಲು ಮಾತನಾಡಿ, ಇದೀಗ ನನ್ನ ಮೇಲೆ ಅಪಾರ ಜವಾಬ್ದಾರಿ ಬಂದಿದೆ. ಪಕ್ಷವನ್ನು ಕೆಳಮಟ್ಟದಿಂದ ಕಟ್ಟಲು ಪ್ರಯತ್ನಿಸುತ್ತೇನೆ. ಇಂದಿರಾ ಗಾಂಧಿ ಬ್ಲಾಕ್ ವ್ಯಾಪ್ತಿಯ ಎಲ್ಲ ಕಾರ್ಯಕರ್ತರು ಹಾಗೂ ಮುಖಂಡರ ಜತೆ ಉತ್ತಮ ಸಂಪರ್ಕ ಬೆಳೆಸುವ ಮೂಲಕ ಪಕ್ಷದ ಬೆಳವಣಿಗೆಗೆ ದುಡಿಯುತ್ತೇನೆ ಎಂದರು.
ಚಾಮರಾಜ ಕ್ಷೇತ್ರ ಕಾಂಗ್ರೆಸ್‍ನ ಭದ್ರಕೋಟೆ. ಇದನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಮುಂಬರುವ ಎಲ್ಲ ಚುನಾವಣೆಗಳಲ್ಲೂ ಪಕ್ಷದ ಅಭ್ಯರ್ಥಿಗಳೇ ಜಯ ಗಳಿಸಬೇಕೆನ್ನುವ ನಿಟ್ಟಿನಲ್ಲಿ ಶಾಸಕ ಹರೀಶಗೌಡ ತಂಡ ರಚನೆ ಮಾಡುತ್ತಿದ್ದಾರೆ. ಹಗಲಿರುಳು ಕೆಲಸ ಮಾಡುವ ಮಾಡುವ ಮೂಲಕ ಅವರ ಕೈ ಬಲಪಡಿಸಲಾಗುತ್ತದೆ ಎಂದರು.
ಶಾಸಕ ಹರೀಶ್‍ಗೌಡ ಈಗಾಗಲೇ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದು, ಮುಂಬರುವ ದಿನಗಳಲ್ಲಿ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಹೊಂದಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿರುವುದರಿಂದ ಹೆಚ್ಚಿನ ಅನುದಾನ ಸಿಗಲಿದೆ. ಇದು ಎಲ್ಲರಿಗೂ ವರದಾನವಾಗಲಿದ್ದು, ಪಾಲಿಕೆ, ಲೋಕಸಭೆ ಸೇರಿದಂತೆ ಎಲ್ಲ ಚುನಾವಣೆಯಲ್ಲೂ ಕೈಗೆ ಜಯ ದೊರಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ಕೆ.ಹರೀಶ್‍ಗೌಡ ಮಾತನಾಡಿ, ರವಿ ಮಂಚೇಗೌಡನಕೊಪ್ಪಲು ಅವರು ಉತ್ತಮ ಸಂಘಟನಕಾರರಾಗಿದ್ದಾರೆ. ಇದೀಗ ಅವರು ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷರಾಗಿರುವುದು ಪಕ್ಷಕ್ಕೂ ಶಕ್ತ ನೀಡಿದೆ ಎಂದರು.
ಕಾಂಗ್ರೆಸ್ ನಗರಾಧ್ಯಕ್ಷ ಮೂರ್ತಿ, ಮಾಜಿ ಮೇಯರ್‍ಗಳಾದ ಬಿ.ಕೆ.ಪ್ರಕಾಶ್, ಚಿಕ್ಕಣ್ಣ, ಮೋದಾಮಣಿ, ಪುಷ್ಪಲತಾ ಚಿಕ್ಕಣ್ಣ, ಮುಖಂಡರಾದ ಚೇತನ್, ಡಾ.ಶುಶ್ರುತ್ ಗೌಡ, ಉಪಾ, ಮಾದೇವಪ್ಪ ಸೇರಿದಂತೆ ಇತರರಿದ್ದರು.