ಬ್ಲಾಕ್‌ಮೇಲ್ ಖತರ್ನಾಕ್ ಜೋಡಿ ಸೆರೆ

ಬೆಂಗಳೂರು,ಸೆ.೧೫- ಪ್ರೇಮಿಗಳ ಖಾಸಗಿ ವಿಡಿಯೊ ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡಿದ ಖತರ್ನಾಕ್ ಜೋಡಿಯನ್ನು ಚಂದ್ರ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಎಂಬಿಎ ಪದವೀಧರೆ ವಿದ್ಯಾರ್ಥಿನಿಯೊಬ್ಬರಿಗೆ ಬಂಧಿತರೇ ರೂಮ್ ನೀಡಿ ಬ್ಲಾಕ್‌ಮೇಲ್ ಮಾಡಿರುವುದು ಪೊಲೀಸರ ವಿಚಾರಣೆಯಲ್ಲಿ ಪತ್ತೆಯಾಗಿದ್ದು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
ಕೆಂಗೇರಿ ಮುಖ್ಯರಸ್ತೆಯಲ್ಲಿರುವ ಕೆಂಚನಾಪುರದಲ್ಲಿರುವ ಹೋಟೆಲ್‌ನಲ್ಲಿ ಕೃತ್ಯ ನಡೆಸಿದ ನಯನಾ ಹಾಗೂ ಕಿರಣ್ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರು ಕೆಂಚನಾಪುರದಲ್ಲಿ ಶೆಟ್ಟಿ ಲಂಚ್ ಹೋಮ್ ಎಂಬ ಹೋಟೆಲ್ ನಡೆಸುತ್ತಿದ್ದು,
ಎಂಬಿಎ ವಿದ್ಯಾರ್ಥಿನಿ ಯುವತಿ ಆರೋಪಿ ನಯನಾಳ ಸಂಬಂಧಿಯೇ ಆಗಿದ್ದಾಳೆ. ಯುವತಿ ಹೋಟೆಲ್‌ಗೆ ಪ್ರಿಯಕರನ ಜೊತೆ ಹೋಗುತ್ತಿದ್ದಳು. ಈ ವೇಳೆ ಹೋಟೆಲ್ ರೂಮ್‌ನಲ್ಲಿ ಇರುವಂತೆ ಅವರೇ ಹೇಳುತ್ತಿದ್ದರು. ರೂಮಿನಲ್ಲಿ ರಹಸ್ಯವಾಗಿ ಕ್ಯಾಮೆರಾ ಇಟ್ಟು, ಇಬ್ಬರ ಖಾಸಗಿ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ.
ಅದನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಯುವತಿಗೆ ಕಿರಣ್ ವಾಟ್ಸ್‌ಆಪ್ ಮಾಡಿದ್ದ. ನಂತರ ಫೋಟೊ, ವಿಡಿಯೋ ತಕ್ಷಣ ಡಿಲೀಟ್ ಮಾಡಿದ್ದ. ನಂತರ ಕರೆ ಮಾಡಿ ಒಂದು ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ. ಹಣ ಕೊಡದಿದ್ದರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ, ನಿಮ್ಮ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಕಳುಹಿಸುವುದಾಗಿ ನಯನಾ ಮತ್ತು ಕಿರಣ್ ಬ್ಲ್ಯಾಕ್‌ಮೇಲ್ ಮಾಡಿದ್ದರು.
ಯುವತಿ ಈ ಕುರಿತು ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ದಾಖಲಿಸಿ ನಯನ ಹಾಗೂ ಕಿರಣ್‌ರನ್ನು ಪೊಲೀಸರು ಬಂಧಿಸಿದ್ದಾರೆ.