ಬ್ರ್ಯಾಂಡ್ ಬೆಂಗಳೂರಿಗೆ ಒತ್ತು

ಬಿಬಿಎಂಪಿಯ ೨೦೨೪-೨೦೨೫ನೇ ಸಾಲಿನ ಆಯವ್ಯಯ ಪುಸ್ತಕವನ್ನು ಆಡಳಿತಗಾರ ರಾಕೇಶ್ ಸಿಂಗ್, ಆಯುಕ್ತ ತುಷಾರ್ ಗಿರಿನಾಥ್, ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ ಕಲಕೇರಿ ಇದ್ದಾರೆ.

ಬೆಂಗಳೂರು, ಫೆ.೨೯-ಮುಂಬರುವ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಗರದ ಜನತೆಗೆ ಹೊರೆಯಾಗದ ರೀತಿಯಲ್ಲಿ ಪಾಲಿಕೆ ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿದ್ದು, ಬ್ರ್ಯಾಂಡ್ ಬೆಂಗಳೂರು ಕಲ್ಪನೆಗೆ ಮತ್ತಷ್ಟು ವೇಗ ನೀಡಲು ಪಾಲಿಕೆ ಮುಂದಾಗಿದೆ. ಇದಕ್ಕಾಗಿ ಬಜೆಟ್‌ನಲ್ಲಿ ೧,೫೮೦ ಕೋಟಿ ರೂ. ಸೇರಿದಂತೆ ನಗರದ ಸಂಚಾರಿ ದಟ್ಟಣೆ, ಮೂಲಸೌಕರ್ಯ, ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಒಟ್ಟು, ೧೨,೩೭೧.೬೩ ಕೋಟಿ ರೂ.ಗಳಷ್ಟು ಬಜೆಟ್ ಗಾತ್ರ ಮಂಡಿಸಲಾಗಿದೆ.
ಪೌರ ಕಾರ್ಮಿಕರಿಗೆ,ಮಹಿಳೆಯರಿಗೆ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಹಿಂದುಳಿದ ಸಮುದಾಯಕ್ಕೆ ಇ-ಸಾರಥಿ ಯೋಜನೆಯನ್ನ ಪ್ರಸಕ್ತ ಸಾಲಿನಿಂದ ಜಾರಿಗೆ ತರಲು ಪಾಲಿಕೆ ತೀರ್ಮಾನಿಸಿದೆ.
೨೦ ಲಕ್ಷ ಆಸ್ತಿಗಳಿಗೆ ಇ-ಖಾತಾ, ೧೬ ಸಾವಿರ ಪೌರಕಾರ್ಮಿಕರ ನೇಮಕ, ತ್ಯಾಜ್ಯ ಸಂಸ್ಕರಿಸಲು ೧೦೦ ಎಕರೆ ಜಮೀನು ಖರೀದಿ, ಎಂಟು ವಲಯಗಳಲ್ಲಿ ಆಡಳಿತ ಬಲಪಡಿಸುವ ಸಲುವಾಗಿ ಐಎಎಸ್ ಅಧಿಕಾರಿಗಳ ನೇಮಕ, ೫೦ ಇಂದಿರಾ ಕ್ಯಾಂಟೀನ್ ಸ್ಥಾಪನೆ ಸೇರಿದಂತೆ ಬ್ರ್ಯಾಂಡ್ ಬೆಂಗಳೂರು ಹೆಗ್ಗಾಳಿಕೆ ಹೆಚ್ಚಿಸಲು ಹತ್ತು ಹಲವು ಯೋಜನೆಗಳ ಮೂತ್ತು ನೀಡಲಾಗಿದೆ. ಸತತ ೪ನೇ ಬಾರಿ ಪಾಲಿಕೆಯಲ್ಲಿ ಜನಪ್ರತಿನಿಧಿಗಳಿಲ್ಲದೆ ಬಜೆಟ್ ಮಂಡಿಸಲಾಗಿದೆ.
ನಗರದಲ್ಲಿಂದು ಟೌನ್‌ಹಾಲ್ ಸಭಾಂಗಣದಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅಧ್ಯಕ್ಷತೆ ಹಾಗೂ ಮುಖ್ಯ ಆಯುಕ್ತ *ತುಷಾರ್ ಗಿರಿ ನಾಥ್ ಉಪಸ್ಥಿತಿಯಲ್ಲಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ ಕಲಕೇರಿ ಅವರು ೨೦೨೪-೨೫ನೇ ವರ್ಷದಲ್ಲಿ ಪಾಲಿಕೆಯ ಆದಾಯವು ಪ್ರಾರಂಭಿಕ ಶುಲ್ಕ ಸೇರಿ ಒಟ್ಟು ಸ್ವೀಕೃತಿ ೧೨,೩೭೧.೬೩ ಕೋಟಿ ರೂ.ಗಳಷ್ಟು ಇದ್ದು, ಒಟ್ಟು ಖರ್ಚು ೧೨,೩೬೯.೪೬ ಕೋಟಿ ರೂ. ಇರಲಿದೆ ಎಂದು ಪ್ರಕಟಿಸಿದರು.
ಸಮಕಾಲೀನ ಬೆಂಗಳೂರು ನಗರವು ಜಾಗತೀಕರಣದ ಪ್ರಭಾವಗಳಿಂದ ರೂಪುಗೊಂಡ ಒಂದು ಕಾಸ್ಮೋಪೋಲಿಟನ್ ನಗರವಾಗಿದೆ. ಭಾರತದ ಸಿಲಿಕಾನ್ ವ್ಯಾಲಿ ಮತ್ತು ಐ.ಟಿ.
ರಾಜಧಾನಿ ಎಂದೇ ಹೆಸರುವಾಸಿಯಾಗಿರುವ ಈ ನಗರವು ಇದೀಗ ನವೋದ್ಯಮಗಳ ನೆಲೆಯಾಗಿಯೂ ಗಮನ ಸೆಳೆದಿದೆ.
ಅಂದಾಜು ಒಂದು ಕೋಟಿ ನಲವತ್ತು ಲಕ್ಷದಷ್ಟು ಜನಸಂಖ್ಯೆಯೊಂದಿಗೆ, ಇಡೀ ಭಾರತದಲ್ಲಿ ಅಷ್ಟೇ ಅಲ್ಲ, ಜಗತ್ತಿನಲ್ಲಿಯೇ ಅತ್ಯಂತ ಪಮುಖ ನಗರವಾಗಿದೆ. ಶರವೇಗದ ಈ ಬೆಳವಣಿಗೆಯು ಮೂಲಸೌಕರ್ಯ, ಸಂಚಾರ, ಮೂಲ ಸೌಲಭ್ಯಗಳು ಮತ್ತು ಪರಿಸರ ಸುಸ್ಥಿರತೆಯನ್ನು ಒದಗಿಸಲು ಪಾಲಿಕೆಗೆ ಸವಾಲುಗಳನ್ನು ಒಡ್ಡುತ್ತಲೇ ಬಂದಿದೆ. ಬೆಳೆಯುತ್ತಿರುವ ಈ ಜನಸಂಖ್ಯೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಹಾಗೂ ಬೆಂಗಳೂರಿನಲ್ಲಿ ಜೀವನ ಗುಣಮಟ್ಟ ಹೆಚ್ಚಿಸುವ ಗುರುತರ ಜವಾಬ್ದಾರಿಯು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಲಿದೆ ಎಂದು ನುಡಿದರು.
೨೦೨೪-೨೫ನೇ ವರ್ಷದಲ್ಲಿ ಪಾಲಿಕೆಯ ಸ್ವಂತ ಸಂಪನ್ಮೂಲಗಳಿಂದ ಆದಾಯವು ಪ್ರಾರಂಭಿಕ ಶಿಲ್ಕು ಸೇರಿ ೮,೨೯೪.೦೪ ಕೋಟಿ ರೂ.ಗಳಷ್ಟು ಇರಲಿದ್ದು, ಕೇಂದ-ರಾಜ್ಯ ಅನುದಾನಗಳು ೪,೦೭೭.೫೯ ಕೋಟಿ ರೂ.ಗಳಷ್ಟು ಇರಲಿವೆ.
ಒಟ್ಟು ಸ್ವೀಕೃತಿ ೧೨,೩೭೧.೬೩ ಕೋಟಿ ರೂ.ಗಳಷ್ಟು ಇದ್ದರೆ, ಒಟ್ಟು ಖರ್ಚು ೧೨,೩೬೯.೪೬ ಕೋಟಿ ರೂ. ಇರಲಿದ್ದು, ಒಟ್ಟು ೨.೧೭ ಕೋಟಿ ರೂ. ಉಳಿತಾಯದ ಆಯವ್ಯಯವನ್ನು ನಗರದ ಜನತೆಯ ಮುಂದೆ ಪ್ರಸ್ತುತ ಪಡಿಸಲಾಗಿದೆ.
ಈ ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಿಂದ ಹೊಸ ಮತ್ತು ದೀರ್ಘಾವಧಿ ಮುಂದಾಲೋಚನೆಯ ಸಮಗ ಬೆಂಗಳೂರು ಅಭಿವೃದ್ದಿಗೆ ಅಡಿಗಲ್ಲು ಹಾಕುತ್ತಿದ್ದೇವೆ ಎಂದು ಅವರು ಪ್ರಕಟಿಸಿದರು.