ಬ್ರೋಕರ್‍ಗಳ ಮೇಲೆ ಶಿಸ್ತು ಕ್ರಮ ಜರುಗಿಸಲು ಒತ್ತಾಯ

ತಿ.ನರಸೀಪುರ.ಏ.22: ಪುರಸಭೆಯಲ್ಲಿ ಕೆಲ ಬ್ರೋಕರ್ ಗಳು ಶಾಸಕರ ಹೆಸರೇಳಿಕೊಂಡು ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದು ಕೂಡಲೇ ಶಾಸಕರು ಇಂತಹ ಬ್ರೋಕರ್‍ಗಳ ಮೇಲೆ ಶಿಸ್ತು ಕ್ರಮ ಜರುಗಿಸಲು ಮುಂದಾಗ ಬೇಕೆಂದು ಪುರಸಭಾ ಸದಸ್ಯ ಆರ್.ಅರ್ಜುನ್ ಒತ್ತಾಯಿಸಿದರು.
ಪಟ್ಟಣದ ಲೋಕೋಪಯೋಗಿ ಅತಿಥಿ ಗೃಹ ದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಗೋಪಾಲಪುರ ಗ್ರಾಮದ ಮೂಲ ನಿವಾಸಿಯಾಗಿರುವ ನಾನು ಸ್ಥಳೀಯ ಜನ ಪ್ರತಿನಿಧಿ ಯಾಗಿದ್ದು,ನಮ್ಮ ತಂದೆ ಎರಡು ಅವಧಿಗೆ ವಿಧಾನ ಪರಿಷತ್ ನಲ್ಲಿ ಸೇವೆ ಸಲ್ಲಿಸಿದ್ದಾರೆ. ಗೋಪಾಲಪುರ ಗ್ರಾಮದ ಸರ್ವೆ ನಂ.7 ಮತ್ತು 41/3 ರಲ್ಲಿ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಅನೇಕ ವರ್ಷಗಳಿಂದಲೂ ಗೊಂದಲ ಇದೆ.ಈ ನಿವೇಶನವು ಗ್ರಾಮದ ಕಡುಬಡವರಿಗೆ ಸರಿಯಾದ ರೀತಿಯಲ್ಲಿ ಹಂಚಿಕೆಯಾಗಬೇಕೆಂಬುದು ನಮ್ಮ ಉದ್ದೇಶವಾಗಿದೆ.ನ್ಯಾಯ ಬದ್ಧವಾಗಿ ತೀರಾ ನಿರ್ಗತಿಕರಿಗೆ ನಿವೇಶನ ಹಂಚಿಕೆಯಲ್ಲಿ ಪ್ರಾಶಸ್ತ್ಯ ಕೊಡಬೇಕೆಂಬುದು ನಮ್ಮ ಆಶಯ ವಾಗಿದ್ದು ಗ್ರಾಮದ ಪ್ರತಿಯೊಬ್ಬ ರಿಗೂ ನಿವೇಶನ ಒದಗಿಸಿಕೊಡುವ ನಮ್ಮ ಯತ್ನ ಮುಂದುವರೆದಿದೆ.ಆದರೆ ಗ್ರಾಮಸ್ಥರೇ ಅಲ್ಲದ ವ್ಯಕ್ತಿಯೊಬ್ಬರು ಕಾಂಗ್ರೆಸ್ ಪಕ್ಷದ ಮುಖಂಡರೆಂದು ಹೇಳಿಕೊಂಡು ಉದ್ದೇಶಿತ ನಿವೇಶನ ಈಗಾಗಲೇ ಹಂಚಿಕೆ ಮಾಡಲಾಗಿದೆ ಎಂದು ಜನರನ್ನು ದಿಕ್ಕು ತಪ್ಪಿಸುವ ಕೆಲಸಕ್ಕೆ ಮುಂದಾಗಿದ್ದು,ಇಲ್ಲಿ ಶಾಸಕರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ.
ಈತ ಗ್ರಾಮಸ್ಥನೇ ಅಲ್ಲದಿದ್ದರೂ ಬೇರೆ ಬೇರೆ ಊರಿನಲ್ಲಿದ್ದುಕೊಂಡು ನಾನು ಗೋಪಾಲಪುರ ಗ್ರಾಮದವನೇ ಎಂದು ಹೇಳಿಕೊಂಡು ಪುರಸಭೆಗೆ ಬಂದು ಮುಖ್ಯಾಧಿಕಾರಿ ಗಳನ್ನು ಏಕ ವಚನದಲ್ಲಿ ಮಾತನಾಡಿಸಿ ದಬ್ಬಾಳಿಕೆ ಮಾಡುವ ಮೂಲಕ ತಮ್ಮ ಕೆಲಸಕ್ಕೆ ಒತ್ತಡ ಹೇರುತ್ತಿರುವುದು ಕಂಡುಬಂದಿದೆ.ಅಲ್ಲದೇ ಶಾಸಕರೇ ಹೇಳಿದ್ದಾರೆ ನಾನೇಳಿದ ಕೆಲಸ ಮಾಡಿಕೊಡಬೇಕು ಎಂದು ಅಧ್ಯಕ್ಷರ ಮೇಲೂ ಒತ್ತಡ ತರುತ್ತಿರುವುದರಿಂದ ಶಾಸಕರ ಹೆಸರಿಗೆ ಮಸಿ ಬಳಿಯುವ ಕೆಲಸವಾಗುತ್ತಿದೆ ಎಂದು ಕಿಡಿಕಾರಿದರು.
ಬಡವರಿಂದ ಹಣ ವಸೂಲಿ: ಗೋಪಾಲಪುರದ ನಿವೇಶನ ಹಂಚಿಕೆಯನ್ನು ಇತಿಹಾಸದ ಕಾಲದಿಂದಲೂ ಮಾಡಲು ಸಾಧ್ಯವಾಗಿಲ್ಲ. ಆದರೆ ಈ ವ್ಯಕ್ತಿ ತನ್ನನ್ನು ತಾನೇ ಲೀಡರ್ ಎಂದು ಬಿಂಬಿಸಿಕೊಂಡು ನಿವೇಶನ ಹಂಚಿಕೆಯಾಗಿದೆ ಎಂದು ಹೇಳಿಕೊಂಡು ಏಕಾ ಏಕಿ ಜೆಸಿಬಿ ತಂದು ನಿವೇಶನದ ಜಾಗವನ್ನು ಸ್ವಚ್ಚಗೊಳಿಸಲು ಹೋಗಿ ಜನರನ್ನು ವಂಚಿಸುವ ಕೆಲಸಕ್ಕೆ ಮುಂದಾಗಿರುವುದು ಖಂಡನೀಯವಾಗಿದೆ.ಶಾಸಕರ ಹೆಸರೇಳಿಕೊಂಡು ಬಡ ಜನರಿಂದ ಹಣ ವಸೂಲಿ ಮಾಡುತ್ತಿರುವ ಇಂತಹ ಬ್ರೋಕರ್ ಗಳಿಂದ ಕಾಂಗ್ರೆಸ್ ಪಕ್ಷದ ಇಮೇಜ್ ಗೆ ಧಕ್ಕೆ ಬರಲಿದ್ದು ಶಾಸಕರು ಈತನ ಮೇಲೆ ಪಕ್ಷದ ವತಿಯಿಂದ ಶಿಸ್ತು ಕ್ರಮ ಜರುಗಿಸಲು ಮುಂದಾಗಬೇಕೆಂದು ಒತ್ತಾಯಿಸಿದರು.
ಶಾಸಕರು ವಾಸ್ತವ ಸ್ಥಿತಿ ಅರಿಯಲಿ: ಇತಿಹಾಸದ ಕಾಲದಿಂದಲೂ ಗೋಪಾಲಪುರ ನಿವೇಶನದ ಸಮಸ್ಯೆ ಬಗೆಹರಿದಿಲ್ಲ.ಈಗ ಏಕಾ ಏಕಿ ಬ್ರೋಕರ್ ಒಬ್ಬರು 40ಮಂದಿಗೆ ನಿವೇಶನ ಮಂಜೂರಾಗಿದೆ ಎಂದು ಶಾಸಕರ ಹೆಸರೇಳಿಕೊಂಡು ಹಣ ವಸೂಲಿ ಮಾಡಿದ್ದಾನೆ.ಶಾಸಕರು ವಸ್ತು ಸ್ಥಿತಿ ಅರಿಯಲು ಸ್ಥಳ ಪರಿಶೀಲನೆ ಮಾಡಬೇಕಿದೆ.ಗ್ರಾಮದ ಮೂಲ ವಾಸಿಗಳಾದ ಬಡ ಗೋಪಾಲಪುರ ಗ್ರಾಮದ ಪ.ಜಾತಿಯವರಿಗೆ ನಿವೇಶನ ಒದಗಿಸಿಕೊಡಲು ಶಾಸಕರು ಮುಂದಾಗಬೇಕು.
ಶಾಸಕರು ನಿಗಧಿಪಡಿಸಿದ ದಿನಾಂಕ ದಂದು ನಾವು ಗ್ರಾಮದಲ್ಲಿ ಗ್ರಾಮಸ್ಥರೊಂದಿಗೆ ಹಾಜರಿರುತ್ತೇವೆ.ಶಾಸಕರ ಸಮಕ್ಷಮದಲ್ಲೇ ಬಡ ಜನರಿಗೆ ನಿವೇಶನ ಹಂಚಿಕೆ ಪ್ರಕ್ರಿಯೆ ನಡೆಯಲಿ ಎಂದರು.
ಬಹಿರಂಗ ಆಹ್ವಾನ: ಗೋಪಾಲಪುರ ಗ್ರಾಮದ ಜನರಿಗೆ ನಿವೇಶನ ಕೊಡಿಸುವ ಭರವಸೆ ನೀಡಿ ಹಣ ಪಡೆದು ವಂಚಿಸುತ್ತಿರುವ ವ್ಯಕ್ತಿ ನಮ್ಮ ಗ್ರಾಮದವರೇ ಅಲ್ಲ.ಗ್ರಾಮದವರಾದ ನಮಗೆ ಕುಲ ಎಂಬುದಿದೆ.ಆತ ನಮ್ಮ ಗ್ರಾಮದವನೇ ಎಂಬುದನ್ನು ಸಾಬೀತು ಪಡಿಸಲು ಬಹಿರಂಗ ಆಹ್ವಾನ ನೀಡುತ್ತಿರುವುದಾಗಿ ತಿಳಿಸಿದರು.