ಬ್ರೆಜಿಲ್ ಸೇನಾ ಮುಖ್ಯಸ್ಥರ ರಾಜೀನಾಮೆ: ಬೊಲ್ಸೊನಾರೋಗೆ ತಲೆನೋವು!

ರಿಯೋ ಡಿ ಜನೈರೋ, ಮಾ.೩೧- ಬ್ರೆಜಿಲ್‌ನಲ್ಲಿ ಸದ್ಯ ತೀವ್ರ ಗತಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಿದ್ದು, ಅಧ್ಯಕ್ಷ ಜೈರ್ ಬೊಲ್ಸೆನಾರೋಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ನಡುವೆ ಬ್ರೆಜಿಲ್ ಸೇನೆಯ ಎಲ್ಲಾ ಮೂರು ವಿಭಾಗದ ಮುಖ್ಯಸ್ಥರು ಇದೀಗ ಹಠಾತ್ ರಾಜೀನಾಮೆ ನೀಡಿದ್ದು, ಬೊಲೆನಾರೋಗೆ ಹೊಸ ಸಮಸ್ಯೆ ತಂದಿಕ್ಕಿದೆ.
ಬೊಲ್ಸೆನಾರೋ ಅವರು ಮಿಲಿಟರಿಗಳ ಮೇಲೆ ಅನಗತ್ಯ ನಿಯಂತ್ರಣವನ್ನು ಹೇರುತ್ತಿದ್ದಾರೆ ಎಂದು ಆರೋಪಿಸಿ ಸೇನೆ, ಜಲ ಹಾಗೂ ವಾಯು ಪಡೆಗಳ ಮುಖ್ಯಸ್ಥರು ಇದೀಗ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಒಂದೆಡೆ ಬ್ರೆಜಿಲ್‌ನಲ್ಲಿ ಕೊರೊನಾ ಅಟ್ಟಹಾಸ ನಡೆಸುತ್ತಿದ್ದರೆ ಮತ್ತೊಂದೆಡೆ ಪ್ರಮುಖ ಹುದ್ದೆಗಳ ಅಧಿಕಾರಿಗಳು ರಾಜೀನಾಮೆ ನೀಡುತ್ತಿರುವುದು ಕೂಡ ಬೊಲ್ಸೆನಾರೋಗೆ ಸಮಸ್ಯೆ ತಂದಿದೆ. ಸೋಮವಾರ ರಕ್ಷಣಾ ಹಾಗೂ ವಿದೇಶಾಂಗ ಸಚಿವರು ರಾಜೀನಾಮೆ ನೀಡಿದ ನಂತರ ಬೊಲ್ಸೆನಾರೋ ತನ್ನ ಕ್ಯಾಬಿನೆಟ್‌ನಲ್ಲಿ ಅನಿವಾರ್ಯವಾಗಿ ಬದಲಾವಣೆ ತರುವ ನಿರ್ಧಾರ ತೆಗೆದುಕೊಂಡಿದ್ದರು. ಇದೀಗ ಸೇನಾ ಪ್ರಮುಖರು ರಾಜೀನಾಮೆ ನೀಡಿರುವುದು ನಾಗರಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇನ್ನು ಬ್ರೆಜಿಲ್‌ನಲ್ಲಿ ಕೊರೊನಾದಿಂದ ೩.೧೪ ಲಕ್ಷಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಏರಿಕೆಯಾಗುತ್ತಿದ್ದಂತೆ ಬೊಲ್ಸೊನಾರೊ, ಮಾರ್ಚ್ ಮಧ್ಯದಲ್ಲಿ ಆರೋಗ್ಯ ಖಾತೆ ಸಚಿವರನ್ನು ಬದಲಿಸಿದ್ದರು. ಕೊರೊನಾ ಲಸಿಕೆ ಪೂರೈಕೆಗೆ ಸಂಬಂಧಿಸಿದಂತೆ ವೈಫಲ್ಯ ಎದುರಾಗಿರುವುದಾಗಿ ವಿರೋಧ ಪಕ್ಷವು ವಿದೇಶಾಂಗ ಸಚಿವರನ್ನು ತೀವ್ರ ಟೀಕೆಗೆ ಗುರಿ ಮಾಡಿತ್ತು ಎನ್ನಲಾಗಿದೆ