ಬ್ರಿಮ್ಸ್ ವಿದ್ಯಾರ್ಥಿಗಳಿಗೆ ಕನ್ನಡ ಕಡ್ಡಾಯಕ್ಕೆ ಶಿಫಾರಸ್ಸು: ರಮೇಶ

ಬೀದರ್: ನ.14:ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿದ್ಯಾರ್ಥಿಗಳಿಗೆ ಕನ್ನಡ ಒಂದು ವಿಷಯ ಅಧ್ಯಯನ ಕಡ್ಡಾಯಕ್ಕೆ ರಾಜಕೀವ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಆದಷ್ಟು ಶೀಘ್ರ ಶಿಫರಸ್ಸು ಮಾಡಲಾಗುವುದೆಂದು ಹಂಪಿ ಕನ್ನಡ ವಿಸ್ವವಿದ್ಯಾಲಯದ ಕುಲಪತಿ ಪ್ರೊ. ಸ.ಚಿ ರಮೇಶ ತಿಳಿಸಿದರು.

ಭಾನುವಾರ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬ್ರಿಮ್ಸ್ ಕನ್ನಡ ಸಂಘ ಹಾಗೂ ವಸಿಷ್ಠಾಸ್-2020ನೇ ವೈದ್ಯಕೀಯ ವಿದ್ಯಾರ್ಥಿಗಳ ತಂಡದಿಂದ ಜರುಗಿದ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವೈದ್ಯರದ್ದು ಸದಾ ಒತ್ತಡದ ಬದುಕು. ದೈನಂದಿನ ಜೀವನದಲ್ಲಿ ಗಳಿಕೆ ಜೊತೆಗೆ ಒಂದಿಷ್ಟು ನೆಮ್ಮದಿ ಅವಶ್ಯಕ. ಹಾಗಾಗಿ ತಮ್ಮ ವೃತ್ತಿ ಬದುಕಿನಲ್ಲಿ ಕನ್ನಡ ಕಾವ್ಯಗಳ ಅಧ್ಯಯನ ಹಾಗೂ ಕಾವ್ಯ ರಚನೆ ಬಗ್ಗೆ ಆಸಕ್ತಿ ತೋರಬೇಕು. ಬ್ರಿಮ್ಸ್ ಗ್ರಂಥಾಲಯದಲ್ಲಿ ಹೆಚ್ಚೆಚ್ಚು ಕನ್ನಡ ಗ್ರಂಥಗಳ ಸಂಗ್ರಹಕ್ಕೆ ಕ್ರಮ ವಹಿಸಬೇಕು. ಇದು ಇಲ್ಲಿಯ ವಿದ್ಯಾರ್ಥಿಗಳಿಗೆ ಮಾತೃಭಾಷೆ ಪ್ರೇಮಕ್ಕೆ ಇಂಬು ನೀಡಬಲ್ಲದು. ವೃತ್ತಿ ಜೀವನದಲ್ಲಿ ತಮ್ಮ ಬಳಿಗೆ ಬರುವ ರೋಗಿಗಳಿಗೆ ಕನ್ನಡ ಭಾಷೆಯಲ್ಲಿ ಸಂಬೋಧಿಸಿ ಚಿಕಿತ್ಸೆ ಕೊಡಿಸಿದರೆ ರೋಗಿಗಳ ಅರ್ಧ ರೋಗ ವಾಸಿಯಾಗುತ್ತದೆ. ಇದು ತಮ್ಮ ವೃತ್ತಿ ಬದುಕಿಗೂ ತೃಪ್ತಿ ತರಬಲ್ಲದು ಎಂದರು.

ಕನ್ನಡದ ಮೊಟ್ಟ ಮೊದಲ ಗದ್ಯ ಹಾಗೂ ಕಾವ್ಯ ಗ್ರಂಥಗಳು ಹುಟ್ಟಿದ್ದು ಈ ನೆಲದಲ್ಲಿ. ಹಾಗಾಗಿ ನಿವೆಲ್ಲ ಪುಣ್ಯವಂತರು. ಕರ್ನಾಟಕ ಏಕಿಕರಣಕ್ಕೆ ಇಲ್ಲಿಯ ಭಾಲ್ಕಿ ಶ್ರೀಮಠದ ಶ್ರಮ ಅಷ್ಟಿಷ್ಟಲ್ಲ. ಇಲ್ಲಿಯ ಜಾನಪದ ಸಂಸ್ಕøತಿ, ಕಲೆ ಹಾಗೂ ಸಾಹಿತ್ಯ ಶ್ರೀಮಂತವಾಗಿರುವುದಕ್ಕೆ ಅಭಿನಂದಿಸುವುದಾಗಿ ತಿಳಿಸಿದರು.

ಕನ್ನಡದ ನೆಲದಲ್ಲಿ ಹಲವು ನದಿಗಳು ಹಾಗೂ ಉಪ ನದಿಗಳು ಹರಿಯುತ್ತವೆ. ಎಲ್ಲಕ್ಕೂ ಹೆಣ್ಣಿನ ಹೆಸರಿರುವುದು ಅಭಿಮಾನದ ಮಾತು. ಮಾತೃಭಾಷೆಯೊಂದಿಗೆ ಇಲ್ಲಿ ತುಳು, ಕೊಂಕಣಿ, ಉರ್ದು, ತೆಲಗು, ತಮಿಳು, ಮಲೆಯಾಳಮ್, ಹಿಂದಿ, ಕೊರವ ಭಾಷೆಗಳು ಬೆಳೆದು ನಿಂತಿವೆ. ಇದಕ್ಕೆ ಕನ್ನಡದ ಉದಾರತೆ ಹಾಗೂ ಸಹಕಾರ ಕಾರಣವಾಗಿದೆ ಎಂದರು.

ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಡಾ.ಜಗನ್ನಾಥ ಹೆಬ್ಬಾಳೆ ಮುಖ್ಯ ಅತಿಥಿಗಳಾಗಿ ಮಾತನಾಡಿ, ಹುಮನಾಬಾದ್ ತಾಲೂಕಿನ ಜಲಸಿಂಗಿಯಲ್ಲಿರುವ ಪುರಾತನ ಮಹಾದೇವ ದೇವಾಲಯದಲ್ಲಿ ಶಿಲಾ ಬಾಲಕಿಯೊಬ್ಬಳು ಕನ್ನಡದ ಅಕ್ಷರಗಳು ಬರೆಯುವ ಚಿತ್ರ ನೋಡಿದರೆ 7ನೇ ಶತಮಾನದಲ್ಲಿಯೇ ಮಹಿಳೆಗೆ ಕನ್ನಡದ ಅಧ್ಯಯನವಿತ್ತು ಎಂಬುದನ್ನು ತೋರಿಸುತ್ತದೆ. 12ನೇ ಶತಮಾನದಲ್ಲಿ ಬಸವಣ್ಣನವರ ಆಗಿನ ಅನುಭವ ಮಂಟಪದಲ್ಲಿ ಅಕ್ಕ ಮಹಾದೇವಿ, ಆಯ್ದಕ್ಕಿ ಲಕ್ಕಮ್ಮ ಹಾಗೂ ಅಕ್ಕ ನಾಗಮ್ಮಳಂತಹ ನೂರಾರು ಮಹಿಳೆಯರಿಗೆ ಕನ್ನಡದ ಜ್ಞಾನವಿತ್ತು ಎಂಬುದಕ್ಕೆ ಆಗಿನ ವಚನ ಸಾಹಿತ್ಯದ ಅಧ್ಯಯನದಿಂದ ಗೊತ್ತಾಗುತ್ತದೆ. ಒಟ್ಟಾರೆ ಕನ್ನಡದ ನೆಲದಲ್ಲಿ ಮಹಿಳೆಯರಿಗೆ ಅತ್ಯುನ್ನತ ಸ್ಥಾನವಿದ್ದು, ಕನ್ನಡ ಭಾಷಾಜ್ಞಾನವುಳ್ಳುವರಾಗಿದ್ದರು ಎಂದರು.

ಬ್ರಿಮ್ಸ್ ಕನ್ನಡ ಸಂಘದ ಸಂಯೋಜಕ ಡಾ.ರಾಜಕುಮಾರ ಹೆಬ್ಬಾಳೆ ಪ್ರಾಸ್ತಾವಿಕ ಮಾತನಾಡಿ, ಈ ಭಾಗದಲ್ಲಿ ಕನ್ನಡ ಭಾಷೆ ಹಾಗೂ ಪ್ರಾಂತ ರಚನೆಯಾಗಲು ಹಲವರ ಕೊಡುಗೆ ಇದೆ. ದೇಶ ಸ್ವತಂತ್ರವಾದರೂ ಈ ಭಾಗ ಒಂದು ವರ್ಷ ತಡವಾಗಿ ಸ್ವತಂತ್ರವಾಯಿತು. ಆಗಲೂ ರಜಾಕಾರ ಚಳುವಳಿಯಲ್ಲಿ ಈ ಭಾಗದ ಅನೇಕರು ನೆತ್ತರು ಹರಿಸಿ ಹೈದ್ರಾಬಾದ್ ಕರ್ನಟಕ ಸ್ವತಂತ್ರವಾಗಿಸಿದರು. 1956ರ ಕರ್ನಾಟಕ ಏಕಿಕರಣ ಸಂದರ್ಭದಲ್ಲೂ ಈ ಭಾಗದ ಕೊಡುಗೆ ಬಹಳಷ್ಟಿದೆ. ಇಲ್ಲಿಯ ಶಿಕ್ಷಣ ಸಂಸ್ಥೆಗಳು ತೋರಿದ ಉದಾರ ಕಾಳಜಿ ಹಾಗೂ ಕನ್ನಡದ ಪಟ್ಟದ್ದೇವರೆಂದೇ ಪ್ರಸಿದ್ಧರಾಗಿದ್ದ ಡಾ.ಚನ್ನಬಸವ ಪಟ್ಟದ್ದೇವರು ಹೊರಗೆ ಉರ್ದು ಬೋರ್ಡ್ ಹಾಕಿ ಒಳಗೆ ಕನ್ನಡ ಕಲಿಸಿದದಿದ್ದರೆ ಈ ಭಾಗದಲ್ಲಿ ಕನ್ನಡದ ಅಸ್ತಂಗತ ಇತ್ತು. 1971ರಲ್ಲಿ ಕರ್ನಾಟಕ ನಾಮಕರಣದಲ್ಲಿಯೂ ಸಹ ಬೀದರ್ ಜಿಲ್ಲೆ ಪಾತ್ರವಿದೆ ಎಂದರು.

ಈ ಸಂದರ್ಭದಲ್ಲಿ ನೃಪತುಂಗ ಪ್ರಶಸ್ತಿ ಪುರಸ್ಕøತ ದಿಲೀಪ ಡೊಂಗರಗೆ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕನ್ನಡ ರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ತಿಗಳಿಗೆ ಪ್ರಶಸ್ತಿ ಹಾಗೂ ಬಹುಮಾನ ವಿತರಿಸಲಾಯಿತು. ನಂತರ ವಸಿಷ್ಠಾಸ್-2020 ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.

ಬ್ರಿಮ್ಸ್ ಪ್ರಭಾರಿ ನಿರ್ದೇಶಕ ಡಾ.ಸುಮಂತ ಕಣಜಿಕರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಸ್ಪತ್ರೆಯ ಶಸ್ತ್ರ ಚಿಕಿತ್ಸೆಕ ಡಾ.ಮಹೇಶ ಬಿರಾದಾರ, ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ.ವಿರೇಂದ್ರ ಪಾಟೀಲ, ಮಕ್ಕಳ ವಿಭಾಗದ ಸಹ ಪ್ರಧ್ಯಾಪಕ ಡಾ.ಸಂಜೀವ ಬಿರಾದಾರ, ಎಲುಬು ಹಾಗೂ ಮೂಳೆ ವಿಭಾಗದ ಡಾ.ಗುರುತಪ್ಪ ಶಟಕಾರ, ಗ್ರಂಥ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ನಂದಿನಿ ಬಿರಾದಾರ ವೇದಿಕೆಯಲ್ಲಕಿದ್ದರು.

ಆರಂಭದಲ್ಲಿ ಆಶ್ವಿನಿ ರಾಜಕುಮಾರ ಬಂಪಳ್ಳಿ ಅವರಿಂದ ಸಂಗೀತ ಸೇವೆ ಜರುಗಿತು. ಕು.ವೈಷ್ಣವಿ ಸೀತಾ ಹಾಗೂ ನಿಲೇಶ ಖಾಶೆಂಪುರೆ ಕಾರ್ಯಕ್ರಮ ನಿರೂಪಿಸಿದರು. ವೈದ್ಯಾಧಿಕಾರಿಗಳಾದ ಡಾ.ಲೋಕೇಶ ಪಾಟೀಲ, ಡಾ.ಶೈಲೇಂದ್ರ ಸಿಂಗ್, ಡಾ.ರಾಹುಲ ಬೇದ್ರೆ, ಡಾ.ವಿಜಯಕುಮಾರ ಬಿಲಗುಂದೆ, ಡಾ.ರಾಜಕುಮಾರ ಜಿ.ಬಿ, ಡಾ.ಬನ್ನೀರ್, ಸಿಬ್ಬಂದಿಗಳಾದ ಸಂತೋಷ ಬುಳ್ಳಾ, ಲಿಂಗರಾಜ ಹಿರೇಮಠ, ವಿಜಯಕುಮಾರ ಚಾಮಾ, ಕನ್ಯಾಕುಮಾರಿ, ಶಿವಶರಣಪ್ಪ ಗಣೇಶಪುರ, ಪ್ರಕಾಶ ಕನ್ನಾಳೆ ಸೇರಿದಂತೆ ಕಾಲೇಜಿನ ಎಲ್ಲ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿದ್ದರು.