ಬ್ರಿಮ್ಸ್ ಮಕ್ಕಳ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸೌಲಭ್ಯ: ಪ್ರಭು ಚವ್ಹಾಣ್

ಬೀದರ:ಜೂ.7: ಮಕ್ಕಳಿಗೆ ಕೊರೊನಾ ಸೋಂಕಿನಿಂದ ರಕ್ಷಿಸಲು ಅಗತ್ಯ ಕ್ರಮ ವಹಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬ್ರಿಮ್ಸ್‌ ಆಸ್ಪತ್ರೆಯ ಮಕ್ಕಳ ವಾರ್ಡ್‌ನಲ್ಲಿ ವೆಂಟಿಲೇಟರ್‌ ಸೌಲಭ್ಯವಿರುವ 72 ಬೆಡ್‌ಗಳನ್ನು ಸಿದ್ಧಪಡಿಸಲಾಗಿದೆ ಎಂದು ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್‌ಡೌನ್‌ ಘೋಷಣೆ ಜೂನ್‌ 14ರ ವರೆಗೆ ಮುಂದುವರೆಯಲಿದೆ. ಈ ಹಿಂದಿನಂತೆ ಜಿಲ್ಲೆಯ ಜನತೆ ಲಾಕ್‌ಡೌನ್‌ಗೆ ಸಹಕರಿಸಬೇಕು. ಜಿಲ್ಲೆಯಲ್ಲಿ ಪ್ರಕರಣಗಳು ಕಡಿಮೆಯಾಗುತ್ತಿವೆ ಎಂದು ನಿರ್ಲಕ್ಷÂ ವಹಿಸುವುದು ಬೇಡ. 3ನೇ ಅಲೆಯ ಬಗ್ಗೆ ತಜ್ಞರು ಸೂಚನೆಗಳನ್ನು ನೀಡುತ್ತಿದ್ದಾರೆ. ಜನತೆ ಎಂದಿನಂತೆ ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸಿ ಕೋವಿಡ್‌ ವಿರುದ್ಧದ ಹೋರಾಟಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.ಕೋವಿಡ್‌ನಿಂದಾಗಿ ಅನೇಕರು ಸಮಸ್ಯೆ ಎದುರಿಸುತ್ತಿದ್ದಾರೆ. ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದವರಿಗೆ ನಮ್ಮ ಸರ್ಕಾರ ಯಾವಾಗಲು ನೆರವಿಗೆ ಧಾವಿಸುತ್ತಿದೆ. ಈ ಹಿಂದೆ ಬಿಟ್ಟು ಹೋಗಿದ್ದ ಕೆಲವು ವರ್ಗದವರಿಗೆ ಅನುಕೂಲವಾಗುವ ಉದ್ದೇಶದಿಂದ ಮುಖ್ಯಮಂತ್ರಿಗಳು ಎರಡನೇ ವಿಶೇಷ ಪ್ಯಾಕೇಜ್‌ ಘೋಷಿಸಿದ್ದಾರೆ ಎಂದರು.
ಈ ಪ್ಯಾಕೇಜ್‌ನಲ್ಲಿ ಮಕ್ಕಳಿಗೆ ಪೌಷ್ಠಿಕ ಆಹಾರ ಕಲ್ಪಿಸುವ ಉದ್ದೇಶದಿಂದ 100 ಕೋಟಿ ಮೊತ್ತದ ಪ್ಯಾಕೇಜ್‌ ಘೋಷಿಸಿದ್ದಾರೆ. ಹೈನೋದ್ಯಮಕ್ಕೆ ಉತ್ತೇಜನ ನೀಡಲು ತೀರ್ಮಾನಿಸಿದ ಮುಖ್ಯಮಂತ್ರಿಗಳಿಗೆ ಅನಂತ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು. ಸಕ್ಕರೆ ಕಾರ್ಖಾನೆಗಳ ಅಧ್ಯಕ್ಷರೊಂದಿಗೆ ಸಭೆ ನಡೆಸಿ ಕಬ್ಬು ಪೂರೈಸಿದ ಬೆಳೆಗಾರರಿಗೆ ಶೀಘ್ರ ಬಾಕಿ ಹಣ ಪಾವತಿಸಬೇಕೆಂದು ಮನವಿ ಮಾಡಿದ್ದೇನೆ. ಎನ್‌ಎಸ್‌ ಎಸ್‌ ಕಾರ್ಖಾನೆಯವರು ಪ್ರತಿ ಟನ್‌ ಕಬ್ಬಿಗೆ 2250 ರೂ. ತುರ್ತಾಗಿ ಪಾವತಿಸುವುದಾಗಿ ಒಪ್ಪಿದ್ದಾರೆ ಎಂದು ತಿಳಿಸಿದರು.