ಬ್ರಿಮ್ಸ್ ಆಸ್ಪತ್ರೆಯಲ್ಲಿ ಸಿಬ್ಬಂದಿಯ ಅಸಮರ್ಪಕ ಬಳಕೆ: ಅಸಮಾಧಾನ

ಬೀದರ:ಮೇ.1: ಬ್ರಿಮ್ಸ್ ಆಸ್ಪತ್ರೆ ಭೇಟಿ ಬಳಿಕ ಸಚಿವರಾದ ಡಾ.ಕೆ.ಸುಧಾಕರ ಅವರು ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯ ಸಭಾಂಗಣದಲ್ಲಿ ಏಪ್ರೀಲ್ 30ರಂದು ವೈದ್ಯಾಧಿಕಾರಿಗಳು ಮತ್ತು ಬೋಧಕ ಆಸ್ಪತ್ರೆಯ ಇನ್ನೀತರ ಸಿಬ್ಬಂದಿಯೊಂದಿಗೆ ಸಭೆ ನಡೆಸಿ ಸುಧೀರ್ಘ ಚರ್ಚಿಸಿದರು.
ಆಸ್ಪತ್ರೆಯಲ್ಲಿ ಸಿಬ್ಬಂದಿಯನ್ನು ಸಮರ್ಪಕ ಬಳಕೆ ಮಾಡದಿರುವ ಬಗ್ಗೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಆಸ್ಪತ್ರೆಯಲ್ಲಿ ಏಳನೂರಕ್ಕೂ ಹೆಚ್ಚು ಸಿಬ್ಬಂದಿ ಇದ್ದರೂ ಕೋವಿಡ್ ಚಿಕಿತ್ಸೆಗೆ ಬಳಕೆ ಮಾಡಿಕೊಳ್ಳಲು ನಿಯೋಜಿಸಿರುವ ಸಿಬ್ಬಂದಿ ಮಾಹಿತಿ ಸರಿಯಾಗಿ ನೀಡಲು ವಿಫಲವಾಗಿದ್ದನ್ನು ಕಂಡು ಸಚಿವರು ಬೇಸರ ವ್ಯಕ್ತಪಡಿಸಿದರು.
ರಾತ್ರಿಪಾಳಿಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಇರುವುದಿಲ್ಲ. ರೋಗಿ ಸಂಬಂಧಿಗಳನ್ನು ವಾರ್ಡಗೆ ಬಿಡುತ್ತಾರೆ ಎನ್ನುವ ದೂರುಗಳಿವೆ. ನೀವೇನು ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದ ಸಚಿವರು, ರೋಗದ ಹರಡುವಿಕೆ ತಡೆಯಲು ಮಾರ್ಗಸೂಚಿ ಅನ್ವಯ ಕರ್ತವ್ಯ ನಿರ್ವಹಿಸಬೇಕು ಎಂದರು. ಹೋಮ್ ಐಸೋಲೇಷನ್ ನಲ್ಲಿರುವ ಶಂಕಿತರಿಗೆ ಔಷಧಗಳ ಕಿಟ್ ನೀಡದಿರುವ ಮತ್ತು ನಿಗಾ ವ್ಯವಸ್ಥೆ ರೂಪಿಸದಿರುವ ಬಗ್ಗೆಯೂ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ಜನರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು. ನಿಬರ್ಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಈ ಕೆಲಸಕ್ಕೆ ಚುನಾಯಿತ ಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ತೆಲಂಗಾಣ ಮತ್ತು ಆಂಧ್ರದ ಸೋಂಕಿತರು ಬಂದರೂ ಚಿಕಿತ್ಸೆ ನೀಡಲು ಅಗತ್ಯ ಸಿಬ್ಬಂದಿ ಇದೆ. ಸಮನ್ವಯದೊಂದಿಗೆ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಯಾವುದೇ ಕಾಪೆರ್Çೀರೆಟ್ ಆಸ್ಪತ್ರೆಗೆ ಕಡಿಮೆ ಇಲ್ಲದಂತೆ ವೈದ್ಯರು ಮತ್ತು ಸಿಬ್ಬಂದಿ ಇದ್ದರೂ ಕರ್ತವ್ಯಕ್ಕೆ ಹಾಜರಾಗದಿದ್ದರೆ ಹೇಗೆ? ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳನ್ನು ಪೂರ್ಣ ಪ್ರಮಾಣದಲ್ಲಿ ನಿಯೋಜನೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಇದು ಯುದ್ಧದ ಸಮಯ. ಇಂತಹ ಸಂದರ್ಭದಲ್ಲಿ ಹೌಸ್ ಸರ್ಜನ್ಸ್, ರೆಸಿಡೆಂಟ್ ಡಾಕ್ಟರ್ಸ್, ಪಿಜಿ ಸ್ಟೂಡೆಂಟ್ಸ್ ಗಳು ಕಡ್ಡಾಯವಾಗಿ ಕೋವಿಡ್ ಕರ್ತವ್ಯದಲ್ಲಿ ಪಾಲ್ಗೊಳ್ಳಬೇಕು. ಟೆಲಿಕಾಲ್, ಕೌನ್ಸೆಲಿಂಗ್ ನಂತಹ ಕರ್ತವ್ಯದಲ್ಲಿ ನಿಯೋಜನೆ ಮಾಡಬೇಕು ಎಂದು ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ್ಲ ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್, ಸಂಸದರಾದ ಭಗವಂತ ಖೂಬಾ, ಶಾಸಕರಾದ ಬಂಡೆಪ್ಪ ಖಾಶೆಂಪೂರ, ರಹೀಂ ಖಾನ್, ಜಿಲ್ಲಾ ಪಂಚಾಯತ್ ಸಿಇಓ ಜಹೀರಾ ನಸೀಂ, ಬ್ರಿಮ್ಸ್ ನಿರ್ದೇಶಕರಾದ ಡಾ.ಶಿವಕುಮಾರ ಸಿ, ಡಿಎಎಚ್‍ಓ ಡಾ.ವಿ.ಜಿ.ರೆಡ್ಡಿ, ಡಿಎಸ್‍ಓ ಡಾ.ಕೃಷ್ಣಾ ರೆಡ್ಡಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ರತಿಕಾಂತ ಸ್ವಾಮಿ, ವೈದ್ಯಾಧಿಕಾರಿ ಡಾ.ಮಹೇಶ ತೋಂಡಾರೆ ಹಾಗೂ ಇನ್ನೀತರು ಇದ್ದರು.