ಬ್ರಿಮ್ಸ್ ಆಸ್ಪತ್ರೆಯಲ್ಲಿ ಜರುಗಿದ ಥಲಸೇಮಿಯಾ ತಪಾಸಣೆ

(ಸಂಜೆವಾಣಿ ವಾರ್ತೆ)
ಬೀದರ:ಡಿ.1: ಥಲಸೇಮಿಯಾ ರೋಗ ಮಕ್ಕಳಲ್ಲಿ ಕಂಡುಬಂದರೆ ಅದಕ್ಕೆ ಹೇಗೆ ಚಿಕಿತ್ಸೆ ನೀಡಬೇಕು? ಅಂತಹ ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕೆಂದು ಇಂದು ಬ್ರಿಮ್ಸ್ ಆಸ್ಪತ್ರೆಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಜೊತೆಗೆ ಪಾಲಕರಿಗೆ ತಿಳಿಸಿಕೊಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಬೆಂಗಳೂರಿನ ನಾರಾಯಣ ಹೃದಯಾಲಯದ ಪ್ರಮುಖರಾದ ಡಾ. ರವಿ ಜೋಶಿ ತಿಳಿಸಿದರು.
ಬೀದರನ ಬ್ರಿಮ್ಸ್ ಆಸ್ಪತ್ರೆಯಲ್ಲಿ ಥಲಸೇಮಿಯಾ ರೋಗದ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಜೋಶಿಯವರು ಮಕ್ಕಳಲ್ಲಿ ಥಲಸೇಮಿಯಾ ರೋಗ ಬರಬಾರದೆಂದು ಎಚ್‍ಎಲ್‍ಎ ತಪಾಸಣೆ ನಡೆಸಲಾಗುತ್ತಿದೆ. ಮಕ್ಕಳ ರಕ್ತದ ಮಾದರಿ ತೆಗೆದುಕೊಂಡು ಜರ್ಮನಿಗೆ ಕಳುಹಿಸಲಾಗುತ್ತಿದೆ. ಒಂದು ವೇಳೆ ರೋಗ ಕಂಡುಬಂದರೆ ಅವರನ್ನು ಭಾರತ ಸರ್ಕಾರದ ವತಿಯಿಂದ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಮಕ್ಕಳ ಜೊತೆಗೆ ಅವರ ಅಣ್ಣ-ತಮ್ಮ, ಅಕ್ಕ-ತಂಗಿಯರಿಗೂ ತಪಾಸಣೆ ಮಾಡಿಸಲಾಗುತ್ತಿದೆ. ಒಟ್ಟಿನಲ್ಲಿ ಥಲಸೇಮಿಯಾ ರೋಗ ಮಕ್ಕಳಿಂದ ದೂರ ಮಾಡುವ ನಿಟ್ಟಿನಲ್ಲಿ ಬ್ರಿಮ್ಸ್ ಆಸ್ಪತ್ರೆಯ ಸಹಯೋಗದೊಂದಿಗೆ ನಿರಂತರ ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕೆ ಬ್ರಿಮ್ಸ್ ನಿರ್ದೇಶಕ ಡಾ. ಚಂದ್ರಕಾಂತ ಚಿಲ್ಲರ್ಗಿ ಹಾಗೂ ಅಧೀಕ್ಷಕ ಡಾ. ಶಿವಕುಮಾರ ಶೆಟಕಾರ ಜೋಡೆತ್ತಿನಂತೆ ನಿರಂತರ ಸಹಕಾರ ನೀಡುತ್ತಿದ್ದಾರೆ ಎಂದು ಡಾ. ರವಿ ಜೋಶಿ ತಿಳಿಸಿದರು.
ಬ್ರಿಮ್ಸ್ ಆಸ್ಪತ್ರೆಯ ಅಧೀಕ್ಷಕ ಡಾ.ಶಿವಕುಮಾರ ಶೆಟಕಾರ ಮಾತನಾಡಿ, “ಬ್ರಿಮ್ಸ್‍ನ ನಿರ್ದೇಶಕ ಡಾ. ಚಂದ್ರಕಾಂತ ಚಿಲ್ಲರ್ಗಿಯವರ ಸತತ ಪ್ರಯತ್ನ ಹಾಗೂ ಮಾರ್ಗದರ್ಶನದಲ್ಲಿ ಬೆಂಗಳೂರಿನ ನಾರಾಯಣ ಆರೋಗ್ಯ ಸಂಸ್ಥೆಯ ಸಹಯೋಗದೊಂದಿಗೆ ಮಕ್ಕಳಲಿ ಕಂಡು ಬರುವ ಥಲಸೇಮಿಯಾ ರೋಗ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಸತತ ಪ್ರಯತ್ನ ಮಾಡಲಾಗುತ್ತಿದೆ. ಮಕ್ಕಳ ವಿಭಾಗದ ಮುಖ್ಯಸ್ಥೆ ಡಾ. ಶಾಂತಲಾ ಕೌಜಲಗಿ ಹಾಗೂ ಅವರ ತಂಡ ನಿರಂತರ ಶ್ರಮಿಸುತ್ತಿದ್ದಾರೆ. ಪ್ರತೀ ಮೂರು ತಿಂಗಳಿಗೊಮ್ಮೆ ಉಚಿತ ಶಿಬಿರ ಆಯೋಜನೆ ಮಾಡಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿಕೊಂಡರು.
ಬ್ರಿಮ್ಸ್ ಮಕ್ಕಳ ವಿಭಾಗದ ಮುಖ್ಯಸ್ಥೆ ಡಾ. ಶಾಂತಲಾ ಕೌಜಲಗಿ ಮಾತನಾಡಿ, “ಬೆಂಗಳೂರಿನ ನಾರಾಯಣ ಹೃದಯಾಲಯದ ಮುಖ್ಯಸ್ಥರಾದ ಡಾ. ರವಿ ಜೋಶಿಯವರು ತಾವಾಗಿಯೇ ಬೀದರ ಬ್ರಿಮ್ಸ್‍ಗೆ ಹುಡುಕಿಕೊಂಡು ಬಂದು ಮಕ್ಕಳ ಥಲಸೇಮಿಯಾ ರೋಗಕ್ಕೆ ಉಚಿತವಾಗಿ ಚಿಕಿತ್ಸೆ ನೀಡಲು ಮುಂದೆ ಬಂದಿದ್ದಾರೆ. ಇಂದು ಸುಮಾರು 30 ಕ್ಕೂ ಹೆಚ್ಚು ಮಕ್ಕಳ ತಪಾಸಣೆ ನಡೆಸಲಾಗಿದೆ. ಬೀದರ ಜನತೆ ಇದರ ಉಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಇದೇ ವೇಳೆ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ವರ್ಗದವರು ಸೇರಿದಂತೆ ಪಾಲಕರು ಶಿಬಿರದ ಸದುಪಯೋಗ ಪಡೆದುಕೊಂಡರು.