ಬ್ರಿಮ್ಸ್ ಆಸ್ಪತ್ರೆಗೆ ಆಂಬುಲನ್ಸ್ ದೇಣಿಗೆ

ಬೀದರ:ಮೇ.26: ಕೋವಿಡ್ ಸೋಂಕಿತರ ತುರ್ತು ವೈದ್ಯಕೀಯ ಸೇವೆಗಾಗಿ ವಂದೇ ಮಾತರಂ ಪಬ್ಲಿಕ್ ಸ್ಕೂಲ್, ನ್ಯೂ ಝೀರಾ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಹಾಗೂ ಶ್ರೀ ವೀರಭದ್ರ ಎಂಟರ್‍ಪ್ರೈಸೆಸ್‍ನ ಶ್ರೀ ಸಿಮೆಂಟ್ ಜಂಟಿಯಾಗಿ ಇಲ್ಲಿಯ ಬ್ರಿಮ್ಸ್ ಆಸ್ಪತ್ರೆಗೆ ಆಂಬುಲನ್ಸ್ ದೇಣಿಗೆಯಾಗಿ ನೀಡಿವೆ.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಅವರು ಬ್ರಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಅಧೀಕ್ಷಕ ಡಾ. ಶಿವಕುಮಾರ ಶೆಟಕಾರ ಅವರಿಗೆ ಬೀಗದ ಕೈ ನೀಡಿ ಆಂಬುಲನ್ಸ್ ಹಸ್ತಾಂತರಿಸಿದರು.

ಅಯಾಸಪುರದ ಪಾಟೀಲ ಪರಿವಾರದವರು ಕೋವಿಡ್ ಸೋಂಕಿತರಿಗೆ ಸಹಾಯಹಸ್ತ ಚಾಚಲು ತಮ್ಮ ಅಧೀನದ ಉದ್ದಿಮೆ ಹಾಗೂ ಸಂಸ್ಥೆಗಳ ವತಿಯಿಂದ ಆಂಬುಲನ್ಸ್ ಕೊಡುಗೆಯಾಗಿ ಕೊಟ್ಟಿದ್ದಾರೆ. ಆಂಬುಲನ್ಸ್ ಸೋಂಕಿತರಿಗೆ ಸಂಪೂರ್ಣ ಉಚಿತ ಸೇವೆ ಒದಗಿಸಲಿದೆ ಎಂದು ಅವರು ಹೇಳಿದರು.

ಕೋವಿಡ್ ಸೋಂಕಿಗೆ ಒಳಗಾದವರು ಆಸ್ಪತ್ರೆಗೆ ದಾಖಲಾಗಲು ಆಂಬುಲನ್ಸ್ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.

ಪಾಟೀಲ ಪರಿವಾರವು ಮಾನವೀಯತೆ ಆಧಾರದಲ್ಲಿ ಕೋವಿಡ್ ವೇಳೆ ವಿವಿಧ ಸೇವೆಗಳನ್ನು ಸಲ್ಲಿಸುತ್ತ ಬಂದಿದೆ ಎಂದು ನಾಗಮಾರಪಳ್ಳಿ ಪ್ರಶಂಸೆ ವ್ಯಕ್ತಪಡಿಸಿದರು.

ವಂದೇ ಮಾತರಂ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಶಿವರಾಜ ಪಾಟೀಲ ಮಾತನಾಡಿ, ಕೋವಿಡ್ ಸಂಕಟದ ಸಂದರ್ಭದಲ್ಲಿ ಜನ ಸೇವೆಗೆ ವಿವಿಧ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆ, ಕೇಶವ ಕಾರ್ಯ ಸಂವರ್ಧನ ಸಮಿತಿ, ವಂದೇ ಮಾತರಂ ಪಬ್ಲಿಕ್ ಸ್ಕೂಲ್ ವತಿಯಿಂದ ನಗರದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ. ವಂದೇ ಮಾತರಂ ಸ್ಕೂಲ್‍ನಲ್ಲಿ ಕೋವಿಡ್ ಲಸಿಕಾ ಕೇಂದ್ರ ಶುರು ಮಾಡಲಾಗಿದೆ. 28 ದಿನಗಳಿಂದ ಕೋವಿಡ್ ಸೋಂಕಿತರು, ಅವರ ಸಂಬಂಧಿಕರು ಹಾಗೂ ಕೋವಿಡ್ ವಾರಿಯರ್‍ಗಳಿಗೆ ಉಚಿತ ಆಹಾರ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ಕೋವಿಡ್ ಸೋಂಕಿತರಿಗೆ ಅನುಕೂಲ ಕಲ್ಪಿಸಲು ಆಂಬುಲನ್ಸ್ ದೇಣಿಗೆಯಾಗಿ ನೀಡಲಾಗಿದೆ. ಆಂಬುಲನ್ಸ್ ದಿನದ 24 ಗಂಟೆಯೂ ಸೇವೆ ಒದಗಿಸಲಿದೆ ಎಂದು ತಿಳಿಸಿದರು.

ಶ್ರೀ ವೀರಭದ್ರ ಎಂಟರ್‍ಪ್ರೈಸೆಸ್‍ನ ಶ್ರೀ ಸಿಮೆಂಟ್ ಜಿಲ್ಲಾ ವಿತರಕ ಆಕಾಶ ಪಾಟೀಲ, ನ್ಯೂ ಝೀರಾ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಮಾಲೀಕ ಸಂತೋಷ ಪಾಟೀಲ, ಬ್ರಿಮ್ಸ್ ನೋಡಲ್ ಅಧಿಕಾರಿ ಸುರೇಖಾ, ಸತೀಶ ವಾಲೆ, ಸೂರ್ಯಕಾಂತ ಶೆಟಕಾರ, ಮಲ್ಲಿಕನಾಥ ಮಡಗೆ, ಸಂಗಮೇಶ ಬಿರಾದಾರ, ದಯಾನಂದ, ಇಮಾನುವೆಲ್ ಕೊಡ್ಡಿಕರ್, ಸನ್ನಿ ಗುಮ್ಮಾ, ಕಿಶನ್ ಮೊದಲಾದವರು ಇದ್ದರು.