ಬ್ರಿಮ್ಸಗೆ ಜಿಲ್ಲಾಧಿಕಾರಿಗಳ ದಿಢೀರ್ ಭೇಟಿ: ಪರಿಶೀಲನೆ

ಬೀದರ:ಎ.22: ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್)ನಲ್ಲಿ ಕೋವಿಡ್ ರೋಗಿಗಳಿಗೆ ಅಗತ್ಯಕ್ಕೆ ತಕ್ಕಂತೆ ಬೆಡ್ ಸಿಗುತ್ತಿಲ್ಲ ಎನ್ನುವ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅವರು ನಿನ್ನೆ ದಿಢೀರ್ ಬ್ರಿಮ್ಸ್ ಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದರು.
ಬ್ರಿಮ್ಸ್ ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲ. ಬೆಡ್‍ಗಳ ಲಭ್ಯತೆ ಇಲ್ಲ. ರೆಮ್‍ಡಿಸಿವರ್ ಇಂಜೆಕ್ಷನ್ ಇಲ್ಲ ಎಂಬುದು ಬರೀ ಸುಳ್ಳು ವದಂತಿಯಾಗಿದೆ. ಬ್ರಿಮ್ಸನ ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ 50ಕ್ಕೂ ಹೆಚ್ಚು ಕೋವಿಡ್ ಬೆಡ್‍ಗಳು ಲಭ್ಯತೆ ಇರುತ್ತವೆ. ಆಕ್ಸಿಜನ್ ಸರಬರಾಜು ಇದೆ. ರೆಮ್‍ಡಿಸಿವರ್ ಇಂಜೆಕ್ಷನ್ ಲಭ್ಯತೆ ಇದೆ ಎಂದು ಇದೆ ವೇಳೆಯಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ರತಿಕಾಂತ ಸ್ವಾಮಿ ಅವರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಇದೆ ವೇಳೆಯಲ್ಲಿ ಜಿಲ್ಲಾಧಿಕಾರಿ ಮಾತನಾಡಿ, ಸುಳ್ಳು ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಕೋವಿಡ್‍ಗೆ ಹೆದರಬಾರದು. ಕೋವಿಡ್ ಪಾಜಿಟೀವ್ ವರದಿಯಾದ ಕೂಡಲೇ ನೇರವಾಗಿ ಬ್ರಿಮ್ಸ್‍ಗೆ ಬರದೇ ತಮ್ಮ ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಪ್ರಾಥಮಿಕ ತಪಾಸಣೆ ಪಡೆದು, ಬಳಿಕ ತಾಲೂಕು ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು. ತಾಲೂಕು ಆಸ್ಪತ್ರೆಯ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಬೀದರನ ಬ್ರಿಮ್ಸ್‍ಗೆ ಸೂಚಿಸಿದ್ದಲ್ಲಿ ಮಾತ್ರ ಇಲ್ಲಿ ಬಂದು ದಾಖಲಾತಿ ಪಡೆದುಕೊಳ್ಳಬೇಕು ಎಂದು ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ರುದ್ರೇಶ ಗಾಳಿ, ಬ್ರಿಮ್ಸ್ ವೈದ್ಯಕೀಯ ಅಧೀಕ್ಷಕರು, ಜಿಲ್ಲಾಧಿಕಾರಿಗಳ ಕಚೇರಿಯ ಸಿಬ್ಬಂದಿ ಸತೀಶ ವಾಲೆ ಹಾಗೂ ಇನ್ನೀತರರು ಇದ್ದರು.