
ಲಂಡನ್, ಆ.೧೭- ಯುಕೆಯ ಅತಿದೊಡ್ಡ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾದ ಲಂಡನ್‌ನಲ್ಲಿರುವ ಬ್ರಿಟಿಷ್ ಮ್ಯೂಸಿಯಂನಲ್ಲಿನ ಹಲವು ಅಮೂಲ್ಯ ವಸ್ತುಗಳು ಕಾಣೆಯಾದ ಹಾಗೂ ಹಾನಿಗೊಳಗಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ. ವಜಾಗೊಂಡ ಸಿಬ್ಬಂದಿಯ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವ ಬಗ್ಗೆ ಸಂಗ್ರಹಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಕಾಣೆಯಾದ ವಸ್ತುಗಳಲ್ಲಿ ಚಿನ್ನ, ಆಭರಣಗಳು ಮತ್ತು ಅರೆ-ಪ್ರಶಸ್ತ ಕಲ್ಲುಗಳ ರತ್ನಗಳು ಸೇರಿದಂತೆ ಅನೇಕ ವಸ್ತುಗಳು ಸೇರಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬ್ರಿಟಿಷ್ ಮ್ಯೂಸಿಯಂ ನಿರ್ದೇಶಕ ಹಾರ್ಟ್ವಿಗ್ ಫಿಶರ್, ಕಳೆದ ವಸ್ತುಗಳನ್ನು ಪುನಹ ಪಡೆಯಲು ನಾವು ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸಲಿದ್ದೇವೆ. ಇದು ಅತ್ಯಂತ ಅಸಾಮಾನ್ಯ ಘಟನೆಯಾಗಿದ್ದು, ನಮ್ಮ ಕಾಳಜಿಯಲ್ಲಿರುವ ಎಲ್ಲಾ ವಸ್ತುಗಳ ರಕ್ಷಣೆಯನ್ನು ನಾವು ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ನಾವು ಈಗಾಗಲೇ ನಮ್ಮ ಭದ್ರತಾ ವ್ಯವಸ್ಥೆಗಳನ್ನು ಬಿಗಿಗೊಳಿಸಿದ್ದೇವೆ ಮತ್ತು ಕಾಣೆಯಾದ, ಹಾನಿಗೊಳಗಾದ ಮತ್ತು ಕಳ್ಳತನವಾಗಿರುವ ಬಗ್ಗೆ ಖಚಿತವಾದ ಖಾತೆಯನ್ನು ಪೂರ್ಣಗೊಳಿಸಲು ನಾವು ಹೊರಗಿನ ತಜ್ಞರೊಂದಿಗೆ ಕೆಲಸ ಮಾಡುತ್ತಿದ್ದೇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಗೊಂಡಿದ್ದರೂ ಯಾರೊಬ್ಬರನ್ನು ಈತನಕ ಬಂಧಿಸಲಾಗಿಲ್ಲ ಎನ್ನಲಾಗಿದೆ. ೧೫ನೇ ಶತಮಾನ ಕ್ರಿಸ್ತಪೂರ್ವದಿಂದ ೧೯ ನೇ ಶತಮಾನದ ವರೆಗಿನ ಯಾವುದೇ ವಸ್ತುಗಳನ್ನು ಇತ್ತೀಚೆಗೆ ಪ್ರದರ್ಶನಕ್ಕೆ ಇಡಲಾಗಿಲ್ಲ ಮತ್ತು ಪ್ರಾಥಮಿಕವಾಗಿ ಶೈಕ್ಷಣಿಕ ಮತ್ತು ಸಂಶೋಧನಾ ಉದ್ದೇಶಗಳಿಗಾಗಿ ಇರಿಸಲಾಗಿದೆ ಎಂದು ಮ್ಯೂಸಿಯಂ ಹೇಳಿದೆ.