ಬ್ರಿಟಿಷರ, ನಿಜಾಮರ ವಿರುದ್ಧ ಹೋರಾಡಿದ್ದ ಕಲ್ಯಾಣ ಕರ್ನಾಟಕದ ಜನರು

ಭಾಲ್ಕಿ:ಸೆ.18:ಕಲ್ಯಾಣ ಕರ್ನಾಟಕ ಭಾಗದ ಜನರು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ, ನಿಜಾಮರ ವಿರುದ್ಧ ಹೋರಾಟ ನಡೆಸಿದ್ದರು ಎಂದು ನಿವೃತ್ತ ಪ್ರಾಧ್ಯಾಪಕ ಚಂದ್ರಶೇಖರ ಬಿರಾದರ ಹೇಳಿದರು.

ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಶಿಕ್ಷಣ ಸಮುಚ್ಛಯದಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕಿಂತ ಮುಂಚೆಯೇ ನಮ್ಮ ಭಾಗದ ಬೀದರ್, ಉದಗೀರ್‍ನಲ್ಲಿ ಹೋರಾಟಗಾರರಾದ ಶಿವಲಿಂಗಯ್ಯ ದೇಶಮುಖ, ಲಿಂಗಪ್ಪ ಸೇರಿದಂತೆ ಇತರರು ಹೆಚ್ಚಿನ ಕರ ವಿಧಿಸಿದ್ದರಿಂದ ಹೋರಾಟ ನಡೆಸಿದ್ದರು.

ಮನುಷ್ಯ ಜನ್ಮತಃ ಸ್ವಾತಂತ್ರ್ಯ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾದಾಗಾ ಪ್ರತಿರೋಧ ತೋರಿ ಕಳೆದುಕೊಂಡ ಸ್ವಾತಂತ್ರ್ಯ ಪಡೆದುಕೊಂಡಿದ್ದಾನೆ.
ನಮಗೆ ಸ್ವಾತಂತ್ರ್ಯ ಪುಕ್ಕಟೆ ದೊರೆತಿಲ್ಲ. ಅನೇಕ ಭಯಾನಕ ಪರಿಣಾಮಗಳ ಫಲದಿಂದ ದೊರೆತಿದೆ ಎಂದು ತಿಳಿಸಿದರು.

ಅನುಭವ ಮಂಟಪದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಮಹಾನ್ ನಾಯಕರ ತ್ಯಾಗ, ಬಲಿದಾನ ವ್ಯರ್ಥ ಹೋಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಯುವಕರ ಮೇಲಿದೆ. ಬದುಕಿನಲ್ಲಿ ಅಸಾಧ್ಯವಾದದ್ದು ಯಾವುದೂ ಇಲ್ಲ. ವಿದ್ಯಾರ್ಥಿಗಳು ಚೆನ್ನಾಗಿ ಅಭ್ಯಸಿಸಿ ಬದುಕನ್ನು ಉಜ್ವಲಗೊಳಿಸಿಕೊಂಡು ರಾಷ್ಟ್ರದ ಅಭ್ಯುದಯ ಶ್ರಮಿಸಬೇಕು ಎಂದು ಹೇಳಿದರು.

ಆಡಳಿತಾಧಿಕಾರಿ ಮೋಹನರೆಡ್ಡಿ ಪ್ರಾಸ್ತಾವಿಕ ಮಾತನಾಡಿದರು.

ಸಂಸ್ಥೆ ನಿರ್ದೇಶಕ ಶಶಿಧರ ಕೋಸಂಬೆ, ಪ್ರಾಚಾರ್ಯರಾದ ಬಸವರಾಜ ಮೊಳಕೀರೆ, ಮಹಾದೇವ ಪಟ್ನೆ, ಗಿರೀಶ ಘನವಟಕರ್, ರಮೇಶ ಕುಟಮಲಗೆ, ಶೀಲವಂತ, ಸಂಯೋಜಕ ಮಹೇಶ ಮಹಾರಾಜ್ ಇದ್ದರು.

ಲಕ್ಷ್ಮಣ ಮೇತ್ರೆ ಸ್ವಾಗತಿಸಿದರು. ಬಸವರಾಜ್ ಪ್ರಭಾ ವಂದಿಸಿದರು.