ಬ್ರಿಟನ್ ರಾಜಕುಮಾರಿಗೆ ಕ್ಯಾನ್ಸರ್

ಲಂಡನ್, ಮಾ.೨೩- ಕಳೆದ ಜನವರಿಯಲ್ಲಿ ಹೊಟ್ಟೆ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ನಡೆದ ವೈದ್ಯಕೀಯ ತಪಾಸಣೆಯಲ್ಲಿ ಕ್ಯಾನ್ಸರ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕಿಮೊಥೆರಪಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಬ್ರಿಟನ್‌ನ ವೇಲ್ಸ್ ರಾಜಕುಮಾರಿ ಕೇಟ್ ಬಹಿರಂಗಪಡಿಸಿದ್ದಾರೆ. ಆದರೆ ಕೇಟ್ ಅವರು ಯಾವ ಬಗೆಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂಬ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ.
ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಕೇಟ್, ವೈದ್ಯಕೀಯ ತಪಾಸಣೆಗಳು ಕ್ಯಾನ್ಸರ್ ಪತ್ತೆಯಾಗಿರುವುದನ್ನು ದೃಢಪಡಿಸಿದ್ದು, ಆದರೆ ನಾನು ನಾನು ಚೆನ್ನಾಗಿದ್ದೇನೆ ಮತ್ತು ಪ್ರತಿದಿನ ಬಲಶಾಲಿಯಾಗುತ್ತಿದ್ದೇನೆ. ಕ್ಯಾನ್ಸರ್ ತಡೆಯುವ ಕಿಮೋಥೆರಪಿ ಚಿಕಿತ್ಸೆಗೆ ಒಳಗಾಗುವಂತೆ ನನ್ನ ವೈದ್ಯಕೀಯ ತಂಡ ಸಲಹೆ ಮಾಡಿದೆ ಹಾಗೂ ನಾನು ಈಗ ಚಿಕಿತ್ಸೆಯ ಆರಂಭಿಕ ಹಂತದಲ್ಲಿದ್ದೇನೆ. ಇದು ನಮಗೆ ದೊಡ್ಡ ಆಘಾತ ತಂದಿದೆ. ನಮ್ಮ ಯುವ ಕುಟುಂಬಕ್ಕಾಗಿ ಇದನ್ನು ಖಾಸಗಿಯಾಗಿ ನಿಭಾಯಿಸಲು ನಾನು ಹಾಗೂ ವಿಲಿಯಂ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇನ್ನು ರಾಜಕುಮಾರಿ ಕೇಟ್ ಯಾವ ಬಗೆಯ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಬಗ್ಗೆ ವಿವರಗಳನ್ನು ಬಹಿರಂಗಪಡಿಸಲು ಕಿಂಗ್ ಸ್ಟನ್ ಪ್ಯಾಲೇಸ್ ನಿರಾಕರಿಸಿದೆ. ಆದರೆ ಫೆಬ್ರವರಿಯಲ್ಲಿ ಕಿಮೋಥೆರಪಿ ಆರಂಭವಾಗಿದ್ದು, ಚೇತರಿಕೆಯ ಹಾದಿಯಲ್ಲಿದ್ದಾರೆ. ರಾಜಕುಮಾರಿಯು ಸಂಪೂರ್ಣವಾಗಿ ಚೇತರಿಸಿಕೊಳ್ಳುವ ವಿಶ್ವಾಸವಿದೆ ಎಂದು ಅದು ತಿಳಿಸಿದೆ. ಇನ್ನು ತಾವು ಕೂಡಾ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿರುವುದಾಗಿ ರಾಜ ಚಾರ್ಲ್ಸ್ ಅವರು ಫೆಬ್ರವರಿಯಲ್ಲಿ ಬಹಿರಂಗಪಡಿಸಿದ್ದರು. ಆದ್ದರಿಂದ ತಮ್ಮ ಸರ್ಕಾರಿ ರಾಜನ ಕರ್ತವ್ಯಗಳನ್ನು ಮುಂದೂಡಿರುವುದಾಗಿ ಹೇಳಿದ್ದರು.