ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ರಿಷಿ-ಲಿಝ್ ನಡುವೆ ಅಂತಿಮ ಕದನ

ಲಂಡನ್, ಜು.೨೧- ಬೋರಿಸ್ ಜಾನ್ಸನ್‌ರ ರಾಜೀನಾಮೆಯಿಂದ ತೆರವಾಗಿದ್ದ ಬ್ರಿಟನ್ ಪ್ರಧಾನಿಯ ಕುರ್ಚಿಯ ರೇಸ್ ಇದೀಗ ಮತ್ತಷ್ಟು ತೀವ್ರಗೊಂಡಿದ್ದು, ಅಂತಿಮ ಹಂತಕ್ಕೆ ಬಂದು ತಲುಪಿದೆ. ಸದ್ಯ ಭಾರತೀಯ ಮೂಲದ ರಿಷಿ ಸುನಾಕ್ ಹಾಗೂ ವಿದೇಶಾಂಗ ಕಾರ್ಯದರ್ಶಿ ಲಿಝ್ ಟ್ರುಸ್ ನಡುವೆ ಅಂತಿಮ ಹಣಾಹಣಿಗೆ ವೇದಿಕೆ ಸಜ್ಜಾಗಿದ್ದು, ವಿಶ್ವದ ಗಮನ ಸೆಳೆದಿದೆ.
ಕನ್ಸರ್ವೇಟಿವ್ ಪಕ್ಷದ ಸಹೋದ್ಯೋಗಿಗಳ ಪೈಕಿ ೧೩೭ ಮಂದಿ ಬುಧವಾರ ನಡೆದ ಅಂತಿಮ ಸುತ್ತಿನ ಮತದಾನದಲ್ಲಿ ಸುನಾಕ್ ಪರವಾಗಿ ಮತ ಚಲಾಯಿಸಿದ್ದರಿಂದ ಅಂತಿಮವಾಗಿ ಕಣದಲ್ಲಿ ಉಳಿಯುವ ಅಭ್ಯರ್ಥಿಯಾಗಿ ಸುನಾಕ್ ಹೊರಹೊಮ್ಮಿದರು. ಸುನಾಕ್‌ಗೆ ಮತ್ತೊಂದು ಕಡೆಯಲ್ಲಿ ತೀವ್ರ ಪೈಪೋಟಿ ನೀಡುತ್ತಿರುವ ಟ್ರುಸ್ ಅವರಿಗೆ ಸದ್ಯ ೧೧೩ ಮತ ಚಲಾವಣೆಯಾಗಿದೆ. ಇವರಿಬ್ಬರಿಗೆ ಭಾರೀ ಪೈಪೋಟಿ ನೀಡಿದ್ದ ಕಿರಿಯ ವ್ಯಾಪಾರ ಸಚಿವೆ ಪೆನ್ನಿ ಮಾರ್ಡೋಂಟ್ ಅವರು ೧೦೫ ಮತಗಳೊಂದಿಗೆ ಈಗಾಗಲೇ ಸ್ಪರ್ಧೆಯಿಂದ ನಿರ್ಗಮಿಸಿದ್ದಾರೆ. ಇನ್ನು ಭಾರೀ ಮುನ್ನಡೆ ಸಾಧಿಸಿದ್ದರೂ ರಿಷಿಗೆ ಪ್ರಧಾನಿ ಪಟ್ಟದ ಹಾದಿ ಇನ್ನೂ ಸುಲಭವಾಗಿಲ್ಲ. ಟೋರಿ ಸದಸ್ಯತ್ವದ ಮತದಾನದಲ್ಲಿ ಕಠಿಣ ಸವಾಲು ಎದುರಾಗಲಿದ್ದು, ಇತ್ತೀಚೆಗೆ ನಡೆದ ಸಮೀಕ್ಷೆಯಲ್ಲಿ ಟೋರಿ ಸದಸ್ಯತ್ವ ನೆಲೆ ಟ್ರಸ್ ಬಗ್ಗೆ ಒಲವು ತೋರಿದೆ. ಹಾಗಾಗಿ ಅಂತಿಮ ಹಂತದ ಕದನದಲ್ಲಿ ಇಬ್ಬರ ನಡುವೆ ತೀವ್ರ ಪೈಪೋಟಿ ಏರ್ಪಡುವುದು ಖಚಿತ ಎನ್ನಲಾಗಿದೆ. ಬಿಬಿಸಿ ಚಾನಲ್‌ನಲ್ಲಿ ಸೋಮವಾರ ನಡೆಯಲಿರುವ ಅಂತಿಮ ಅಭ್ಯರ್ಥಿಗಳ ನಡುವಿನ ಮತ್ತೊಂದು ಮುಖಾಮುಖಿ ಚರ್ಚೆ ಮತ್ತು ಸರಣಿ ಭಾಷಣಗಳು ಬ್ರಿಟನ್‌ನ ಉದ್ದಗಲಕ್ಕೂ ನಡೆಯಲಿದ್ದು, ಸಂಸದರ ಫೇವರಿಟ್ ಎನಿಸಿದ ಸುನಾಕ್, ಇದೇ ಫಲಿತಾಂಶವನ್ನು ಸೆಪ್ಟೆಂಬರ್ ೫ರಂದು ನಡೆಯುವ ಅಂಚೆ ಮತದಾನ ಕೊನೆಗೂ ಉಳಿಸಿಕೊಳ್ಳಲು ಅವಕಾಶವಿದೆ. ಇನ್ನು ಎಲ್ಲರ ಗಮನ ಅಂಚೆ ಮತಪತ್ರದ ಕಡೆಗೆ ನೆಟ್ಟಿದ್ದು, ೧೬ ಸಾವಿರಕ್ಕೂ ಅಧಿಕ ಪಕ್ಷದ ಸದಸ್ಯರು ಇದರ ಮೂಲಕವೇ ಮತದಾನ ಮಾಡಲಿದ್ದಾರೆ.