ಬ್ರಿಟನ್ ನಿಂದ ಬೆಂಗಳೂರಿಗೆ ಬಂದ 151 ಜನ ನಾಪತ್ತೆ..!

ಬೆಂಗಳೂರು, ಡಿ.26-ರೂಪಾಂತರ ಕೊರೋನಾ ಸೋಂಕು ಹರಡುವ ಭೀತಿ ನಡುವೆಯೂ ಇತ್ತೀಚಿಗೆ ಬ್ರಿಟನ್‌ನಿಂದ ನಗರಕ್ಕೆ ಬಂದ ಪ್ರಯಾಣಿಕರ ಪೈಕಿ 151 ಜನ ನಾಪತ್ತೆಯಾಗಿರುವ ಮಾಹಿತಿ ದೊರೆತಿದ್ದು, ಅವರ ಪತ್ತೆಗೆ ಬಿಬಿಎಂಪಿ ಮುಂದಾಗಿದೆ.

ನಗರದಲ್ಲಿಂದು ಈ ಕುರಿತು ಪ್ರತಿಕ್ರಿಯಿಸಿದ ಪಾಲಿಕೆಯ ಮುಖ್ಯ ಸಾರ್ವಜನಿಕ ಆರೋಗ್ಯಾಧಿಕಾರಿ ಡಾ. ವಿಜಯೇಂದ್ರ, ಯುಕೆಯಿಂದ ಬಂದಿದ್ದ ಪ್ರಯಾಣಿಕರ ಪೈಕಿ 151 ಜನರು ಇನ್ನೂ ಸಂಪರ್ಕಕ್ಕೆ ಸಿಕ್ಕಿಲ್ಲ. ಹಾಗಾಗಿ, ಪಾಲಿಕೆ ಹಾಗೂ ಪೊಲೀಸ್ ಸಿಬ್ಬಂದಿ ನಿರಂತರವಾಗಿ ಅವರನ್ನು ಸಂಪರ್ಕಿಸಲು ಮುಂದಾಗಿದ್ದಾರೆ ಎಂದು ತಿಳಿಸಿದರು.

ಮತ್ತೊಂದೆಡೆ ಬೆಂಗಳೂರಿಗೆ ಆಗಮಿಸಿದ ಬ್ರಿಟನ್ ಪ್ರಯಾಣಿಕರಲ್ಲಿ 10 ಜನಕ್ಕೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಇವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ, 9 ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಪ್ರಕ್ರಿಯೆಗೆ ಒಳಪಡಿಸಲಾಗಿದೆ.

ಒಟ್ಟಾರೆ ನಗರಕ್ಕೆ 1,512 ಪ್ರಯಾಣಿಕರು ಬ್ರಿಟನ್ ನಿಂದ ವಾಪಸ್ಸಾಗಿದ್ದು, ಇದರಲ್ಲಿ 1248 ಜನರು ಕೋವಿಡ್ ಸೋಂಕು ಪರೀಕ್ಷೆಗೆ
ಲಭ್ಯವಿದ್ದರೆ, 151 ಮಂದಿಯನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.

ಇನ್ನು, 542 ಮಂದಿಯನ್ನು ಈಗಾಗಲೇ ಪರೀಕ್ಷೆಗೆ ಒಳಪಡಿಸಿದ್ದು, 706 ಮಂದಿಯ ಪರೀಕ್ಷೆ ನಡೆಸಬೇಕಾಗಿದೆ. ಈ ಪೈಕಿ, 542 ಮಂದಿಯ ಕೋವಿಡ್ ಪರೀಕ್ಷಾ ವರದಿ ಬಂದಿದ್ದು, 10 ಮಂದಿಯಲ್ಲಿ ಪಾಸಿಟಿವ್, 319 ಮಂದಿಯಲ್ಲಿ ನೆಗೆಟಿವ್ ಫಲಿತಾಂಶ ಬಂದಿದೆ.ಆದರೆ, 212 ಜನರ ವರದಿ ಇನ್ನೂ ಬರಬೇಕಾಗಿದೆ ಎಂದು ಅವರು ವಿವರಿಸಿದರು.

ಬ್ರಿಟನ್‌ನಿಂದ ವಾಪಾಸ್ಸಾದ ಕೋವಿಡ್ ಪಾಸಿಟಿವ್ ರೋಗಿಗಳಲ್ಲಿ ರೂಪಾಂತರ ವೈರಸ್ ಗುಣಲಕ್ಷಣಗಳು ಇದೆಯೇ ಎಂಬುವುದರ ಬಗ್ಗೆಯೂ ನಿಮ್ಹಾನ್ಸ್ ಸಂಶೋಧನೆಯಿಂದ ಗೊತ್ತಾಗಬೇಕಿದೆ
ಎಂದು ಹೇಳಿದರು.