ಬ್ರಿಟನ್‌ನಿಂದ ಬಂದ 160 ಮಂದಿಗೆ ಹುಡುಕಾಟ

ಬೆಂಗಳೂರು, ಜ.೧೦- ರೂಪಾಂತರ ಕೊರೋನಾ ಸೋಂಕು ಭೀತಿ ನಡುವೆ ಯುಕೆಯಿಂದ ಬೆಂಗಳೂರಿಗೆ ಬಂದವರ ಪೈಕಿ ಈಗಲೂ ೧೬೦ ಮಂದಿ ನಾಪತ್ತೆಯಾಗಿದ್ದು, ಇವರ ಹುಡುಕಾಟಕ್ಕಾಗಿ ಬಿಬಿಎಂಪಿ ಸಿಬ್ಬಂದಿ ಹರಸಾಹಸ ಪಡುತ್ತಿದೆ.
ಈವೆರಗೂ ರಾಜಧಾನಿ ಬೆಂಗಳೂರಿಗೆ ಒಟ್ಟು ೪,೮೪೪ ಪ್ರಯಾಣಿಕರು ಬ್ರಿಟನ್‌ನಿಂದ ಬಂದಿದ್ದು, ಅವರಲ್ಲಿ ೨,೦೬೨ ಮಂದಿ ಬೆಂಗಳೂರಿಗೆ ಸೇರಿದವರಾಗಿದ್ದಾರೆ. ಅದರಲ್ಲಿ ೧೮೯೭ ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಆರು ಮಂದಿಯನ್ನು ಸೋಂಕು ಪರೀಕ್ಷೆಗೆ ಒಳಪಡಿಸಬೇಕಿದೆ.
ಮತ್ತೊಂದೆಡೆ ೨೮ ಹಾಗೂ ಅವರ ಸಂಪರ್ಕದಲ್ಲಿದ್ದ ೧೬ ಮಂದಿ ಸೇರಿ ಒಟ್ಟು ೪೪ ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಒಟ್ಟು ಬ್ರಿಟನ್‌ನಿಂದ ಬಂದು ಸೋಂಕು ದೃಢಪಟ್ಟವರ ಪ್ರಾಥಮಿಕ ಸಂಪರ್ಕದಲ್ಲಿ ೯೦ ಮಂದಿ ಹಾಗೂ ೧೧೦ ಮಂದಿ ದ್ವಿತೀಯ ಸಂಪರ್ಕಿತರಿದ್ದಾರೆ.
ಇನ್ನು, ನಾಪತ್ತೆಯಾಗಿರುವ ೧೬೦ ಮಂದಿಯನ್ನು ಹುಡುಕಿಕೊಡುವಂತೆ ಪಾಲಿಕೆಯು ಪೊಲೀಸ್ ಇಲಾಖೆ ಮೊರೆ ಹೋಗಿದೆ ಎಂದು ಪಾಲಿಕೆ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.