ಬ್ರಿಟನ್‌ನಲ್ಲಿ ಒಂದೇ ದಿನ ೧,೩೨೫ ಮಂದಿ ಸೋಂಕಿಗೆ ಬಲಿ

ಲಂಡನ್,ಜ.೯- ಲಂಡನ್‌ನಲ್ಲಿ ರೂಪಾಂತರಿ ಕೊರೊನಾ ಅಬ್ಬರ ಮುಂದುವರೆದಿದ್ದು, ಇಂದು ಒಂದೇ ದಿನ ೧,೩೨೫ ಜನರು ದಾಖಲೆ ಪ್ರಮಾಣದಲ್ಲಿ ಸಾವನ್ನಪ್ಪಿದ್ದಾರೆ. ಇದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಇಂಗ್ಲೆಂಡ್‌ನಲ್ಲಿ ಇದುವರೆಗೂ ಸೋಂಕಿಗೆ ೮೦ ಸಾವಿರ ಜನರು ಬಲಿಯಾಗಿದ್ದು, ೬೮.೦೫೩ ಹೊಸ ಪ್ರಕರಣಗಳು ದಾಖಲಾಗಿವೆ ಎಂದು ಇಂಗ್ಲೆಂಡ್ ಸಾರ್ವಜನಿಕ ಆರೋಗ್ಯ ಸಂಸ್ಥೆ ತಿಳಿಸಿದೆ
ಸೋಂಕು ತಡೆಗೆ ವ್ಯಾಪಕ ಕ್ರಮಗಳನ್ನು ಕೈಗೊಂಡಿದ್ದರೂ ರೂಪಾಂತರಿ ಕೊರೊನಾ ಅತ್ಯಂತ ವೇಗವಾಗಿ ಹರಡುತ್ತಿದೆ. ಸೋಂಕು ನಿಯಂತ್ರಣಕ್ಕೆ ನಿಮಗೆ ವೈರಸ್ ಸಿಕ್ಕಿದ ರೀತಿಯಲ್ಲಿ ವರ್ತಿಸುವಂತೆ ಇಂಗ್ಲೆಂಡ್ ಸರ್ಕಾರ ಹೊಸ ಅಭಿಯಾನವನ್ನು ಆರಂಭಿಸಿದೆ.
ರೂಪಾಂತರಿ ಕೊರೊನಾ ವ್ಯಾಪಕವಾಗಿ ಹಬ್ಬುತ್ತಿದ್ದರೂ ಬಹುತೇಕ ಜನರಲ್ಲಿ ಈ ರೋಗದ ಲಕ್ಷಣಗಳು ಕಂಡುಬರುತ್ತಿಲ್ಲ ಎಂದು ಇಂಗ್ಲೆಂಡಿನ ಆರೋಗ್ಯಾಧಿಕಾರಿ ಪ್ರೊ. ಕ್ರಿಸ್‌ವಿಟ್ಟಿ ತಿಳಿಸಿದ್ದಾರೆ.
ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಮಾತನಾಡಿ ರೂಪಾಂತರಿ ಕೊರೊನಾ ಹೆಚ್ಚಾಗಿರುವುದರಿಂದ ಆಸ್ಪತ್ರೆಗಳ ಮೇಲೆ ಒತ್ತಡ ಹೆಚ್ಚಾಗಿದೆ. ದೇಶದಲ್ಲಿ ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ನಂತರ ದೇಶದಲ್ಲಿ ಸೋಂಕಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿದೆ ಎಂದು ಹೇಳಿದರು.
ಸೋಂಕು ನಿಯಂತ್ರಣದ ಬಗ್ಗೆ ಬ್ರಿಟನ್‌ನಲ್ಲಿ ೩ನೇ ಲಸಿಕೆಯನ್ನು ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದೆ. ಅಮೆರಿಕದ ಔಷಧ ಸಂಸ್ಥೆ ಮಾಡೆರ್ನಾ ಅಭಿವೃದ್ಧಿಪಡಿಸಿರುವ ೧೭ ದಶಲಕ್ಷ ಡೋಸ್‌ಗಳಿಗೆ ಇಂಗ್ಲೆಂಡ್ ಸರ್ಕಾರ ಅನುಮತಿ ನೀಡಿದೆ.
ಈಗಾಗಲೇ ಫೈಜರ್-ಬಯೋನ್‌ಟೆಕ್ ಮತ್ತು ಆಕ್ಸ್‌ಫರ್ಡ್ ಆಸ್ಟ್ರಾಜೆನೆಕಾ ಲಸಿಕೆಗಳಿಗೆ ಈಗಾಗಲೇ ಅನುಮತಿ ದೊರೆತಿದ್ದು, ಇದುವರೆಗೆ ಒಂದೂವರೆ ದಶಲಕ್ಷ ಜನರಿಗೆ ಈ ಲಸಿಕೆಗಳನ್ನು ನೀಡಲಾಗಿದೆ.