ಬ್ರಿಟನ್‌ನಲ್ಲಿ ವಿಶ್ವದ ಮೊದಲ ಎಐ ಶೃಂಗಸಭೆಗೆ ಸಿದ್ಧತೆ

ಲಂಡನ್, ಜೂ.೮- ಸದ್ಯದ ಜಾಗತಿಕ ಮಟ್ಟದಲ್ಲಿ ಕೃತಕ ಬುದ್ದಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಎಐ) ಬಗ್ಗೆ ಚರ್ಚೆಯಾಗುತ್ತಿದ್ದು, ಹೆಚ್ಚಿನ ಎಲೆಕ್ಟ್ರಾನಿಕ್ಸ್ ಉಪಕರಣಗಳಲ್ಲಿ ಇದು ಬಳಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇದೀಗ ವಿಶ್ವದ ಮೊದಲ ಎಐ ಜಾಗತಿಕ ಸಮಾವೇಶ ಆಯೋಜನೆಗೆ ಬ್ರಿಟನ್ ಸಜ್ಜಾಗಿದ್ದು, ಪ್ರಧಾನಿ ರಿಷಿ ಸುನಾಕ್ ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಲಂಡನ್‌ನಲ್ಲಿ ಎಐನ ಪ್ರಧಾನ ಕಾರ್ಯಾಲಯ ಸ್ಥಾಪಿಸುವ ನಿಟ್ಟಿನಲ್ಲಿ ರಿಷಿ ಪ್ರಯತ್ನ ಮುಂದುವರೆಸಿದ್ದಾರೆ.
ಸದ್ಯ ಅಮೆರಿಕಾ ಪ್ರವಾಸದಲ್ಲಿರುವ ರಿಷಿ, ಇಂದು ಅಧ್ಯಕ್ಷ ಜೋ ಬೈಡೆನ್ ಅವರನ್ನು ಭೇಟಿ ಮಾಡಿ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಇನ್ನು ಇದೇ ಅವಧಿಯಲ್ಲಿ ಜಾಗತಿಕ ಮಟ್ಟದ ಎಐ ಸಮಾವೇಶ ಆಯೋಜಿಸುವ ಬಗ್ಗೆ ರಿಷಿ ಹೇಳಿಕೆ ನೀಡಿದ್ದಾರೆ. ಪ್ರಸಕ್ತ ವರ್ಷಾಂತ್ಯದ ವೇಳೆಗೆ ಸಮಾವೇಶ ನಡೆಯಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ರಿಷಿ, ಕೃತಕ ಬುದ್ದಿಮತ್ತೆಯು ನಮ್ಮ ಜೀವನವನ್ನು ಉತ್ತಮವಾಗಿ ಪರಿವರ್ತಿಸಲು ನಂಬಲಾಗದ ಸಾಮರ್ಥ್ಯವನ್ನು ಹೊಂದಿದೆ. ಆದರೆ ಇದನ್ನು ಸುರಕ್ಷಿತ ಹಾಗೂ ಸಂರಕ್ಷಿತ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂಬುದನ್ನು ನಾವು ಮೊದಲ ಖಾತ್ರಿಪಡಿಸಿಕೊಳ್ಳಬೇಕಿದೆ. ಸಮಯದುದ್ದಕ್ಕೂ ಇತಿಹಾಸದಲ್ಲಿ ನಾವು ಮಾದರಿಯನ್ನು ಬದಲಾಯಿಸುವ ಹೊಸ ತಂತ್ರಜ್ಞಾನಗಳನ್ನು ಕಂಡುಹಿಡಿದಿದ್ದೇವೆ ಮತ್ತು ನಾವು ಅವುಗಳನ್ನು ಮಾನವೀಯತೆಯ ಒಳಿತಿಗಾಗಿ ಬಳಸಿಕೊಂಡಿದ್ದೇವೆ. ಹೀಗಾಗಿ ಅದನ್ನೇ ನಾವು ಮತ್ತೆ ಮಾಡಬೇಕು. ಈ ವಿಚಾರದಲ್ಲಿ ಅಮೆರಿಕಾ ಹೊರತುಪಡಿಸಿದರೆ ಯುಕೆ ನಾಯಕತ್ವ ವಹಿಸಲು ಉತ್ತಮ ಸ್ಥಿತಿಯಲ್ಲಿದೆ. ಅಲ್ಲದೆ ಪ್ರಜಾಪ್ರಭುತ್ವ ಹೊಂದಿದ ದೇಶಗಳ ಪೈಕಿ ಕೃತಕ ಬುದ್ದಿಮತ್ತೆ ವಿಚಾರದಲ್ಲಿ ನಾವು ಪ್ರಮುಖ ದೇಶವಾಗಿದ್ದೇವೆ. ನಮ್ಮ ನಾಗರಿಕರನ್ನು ರಕ್ಷಿಸಲು ನಿಯಂತ್ರಣದ ಹಕ್ಕನ್ನು ಪಡೆಯುವ ಸಾಮರ್ಥ್ಯವನ್ನು ನಾವು ಹೊಂದಿದ್ದೇವೆ ಎಂದು ತಿಳಿಸಿದ್ದಾರೆ. ಇನ್ನು ಕಳೆದ ತಿಂಗಳು ಜಪಾನ್‌ನಲ್ಲಿ ನಡೆದಿದ್ದ ಜಿ-೭ ಶೃಂಗಸಭೆಯಲ್ಲೂ ಕೃತಕ ಬುದ್ದಿಮತ್ತೆ ವಿಚಾರದಲ್ಲಿ ಕ್ರಮ ತೆಗೆದುಕೊಳ್ಳಬೇಕಿದೆ ಎಂಬ ಚರ್ಚೆ ನಡೆದಿತ್ತು. ಅಲ್ಲದೆ ಕಳೆದ ವಾರ ಅಮೆರಿಕಾ ಕೃತಕ ಬುದ್ದಿಮತ್ತೆಯ ನೀತಿ ಸಂಹಿತೆಯ ಕುರಿತು ಯುರೋಪಿಯನ್ ಯೂನಿಯನ್ (ಇಯು) ಜೊತೆ ಮಾತುಕತೆ ನಡೆಸಿತ್ತು. ಇನ್ನು ಎಐ ಜಾಗತಿಕ ನೆಲೆಯಲ್ಲಿ ಪ್ರಮುಖ ಸ್ಥಾನ ಪಡೆದುಕೊಳ್ಳಲಿರುವ ಹಿನ್ನೆಲೆಯಲ್ಲಿ ಇದರ ಕೇಂದ್ರ ಸ್ಥಾನವನ್ನು ಲಂಡನ್‌ನಲ್ಲಿ ಸ್ಥಾಪಿಸಲು ರಿಷಿ ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷಾಂತ್ಯಕ್ಕೆ ಎಐನ ಜಾಗತಿಕ ಸಮಾವೇಶವನ್ನು ಲಂಡನ್‌ನಲ್ಲಿ ಆಯೋಜಿಸಲು ಸಿದ್ಧತೆ ನಡೆಸಲಾಗಿದೆ.