ಬ್ರಿಟನ್‌ಗೆ ಭಾರತೀಯರ ಅಕ್ರಮ ಪ್ರವೇಶ

ನವದೆಹಲಿ, ಮೇ ೬- ಇತ್ತೀಚಿಗಿನ ದಿನಗಳಲ್ಲಿ ಉನ್ನತ ಮಟ್ಟದ ಶೈಕ್ಷಣಿಕ ಕ್ಷೇತ್ರದಲ್ಲಿ ಭಾರತ ಅಮೋಘ ಪ್ರಗತಿ ಸಾಧಿಸಿರುವ ಹಿನ್ನೆಲೆಯಲ್ಲಿ ಜಾಗತಮಕ ಮಟ್ಟದಲ್ಲಿ ಭಾರತೀಯರ ಯುವಜನತೆಗೆ ಉದ್ಯೋಗಾವಕಾಶ ಹೆಚ್ಚಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಕ್ಕೆ ತೆರಳುತ್ತಿದ್ದಾರೆ. ಆದರೆ ಇದರ ನಡುವೆಯೂ ಭಾರತೀಯರು ಅಕ್ರಮವಾಗಿ ವಿದೇಶಕ್ಕೆ ಅದರಲ್ಲೂ ಬ್ರಿಟನ್‌ಗೆ ತೆರಳುತ್ತಿರುವ ಸಂಗತಿ ಇದೀಗ ಬಯಲಾಗಿದೆ.
ಪ್ರಸಕ್ತ ವರ್ಷದ ಮೊದಲ ಮೂರು ತಿಂಗಳುಗಳಲ್ಲಿ ಭಾರತೀಯರು ಇಂಗ್ಲಿಷ್ ಕಾಲುವೆಯ ಮೂಲಕ ಅಕ್ರಮವಾಗಿ ಬೋಟ್‌ಗಳಲ್ಲಿ ಬ್ರಿಟನ್ ಪ್ರವೇಶಿಸುತ್ತಿರುವ ಪ್ರಮಾಣ ಭಾರೀ ಸಂಖ್ಯೆಯಲ್ಲಿ ಹೆಚ್ಚಿದೆ ಎಂದು ಯುನೈಟೆಡ್ ಕಿಂಗ್‌ಡಮ್‌ನ ಆಂತರಿಕ ಸಚಿವಾಲಯದ ವರದಿ ತಿಳಿಸಿದೆ. ಈ ಮೂಲಕ ಅಫ್ಘಾನ್ ನಾಗರಿಕರ ಬಳಿಕ ಅಕ್ರಮವಾಗಿ ಬ್ರಿಟನ್ ಪ್ರವೇಶಿಸಿಸುವವರಲ್ಲಿ ಭಾರತೀಯರು ಎರಡನೇ ಸ್ಥಾನದಲ್ಲಿದ್ದಾರೆ ಎಂದು ಅಂಕಿ-ಅಂಶಗಳು ತಿಳಿಸಿದೆ. ಭಾರತದಿಂದ ಮುಖ್ಯವಾಗಿ ಪಂಜಾಬ್‌ನಿಂದ ಬ್ರಿಟನ್‌ಗೆ ಆಗಮಿಸುತ್ತಿರುವವರ ಸಂಖ್ಯೆ ಅಧಿಕವಾಗಿದೆ ಎನ್ನಲಾಗಿದೆ. ಬಳಿಕ ದೆಹಲಿ ಹಾಗೂ ಗುಜರಾತ್‌ನಿಂದ ಪ್ರಯಾಣಿಸುತ್ತಿದ್ದಾರೆ ಎನ್ನಲಾಗಿದೆ. ಪ್ರಸಕ್ತ ವರ್ಷದ ಜನವರಿ ಒಂದರಿಂದ ಮಾರ್ಚ್ ೩೧ರ ವರೆಗೆ ಸುಮಾರು ೩೭೯೩ ನಾಗರಿಕರು ಅಕ್ರಮವಾಗಿ ಸಣ್ಣ ಸಣ್ಣ ಬೋಟ್‌ಗಳ ಮೂಲಕ ಬ್ರಿಟನ್ ಪ್ರವೇಶಿಶಿಸಿದ್ದು, ಇದರಲ್ಲಿ ಅಫ್ಘಾನ್ ನಾಗರಿಕರ ಸಂಖ್ಯೆ (೯೦೯) ೨೪ ಪ್ರತಿಶತದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ ಭಾರತೀಯರು (೬೭೫) ೧೮ ಪ್ರತಿಶತದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ೨೦೨೨ರಲ್ಲಿ ಸುಮಾರು ೬೯೩ ಮಂದಿ ನಾಗರಿಕರು ಅಕ್ರಮವಾಗಿ ಇಂಗ್ಲಿಷ್ ಕಾಲುವೆಯಲ್ಲಿ ಫ್ರಾನ್ಸ್ ಮೂಲಕ ಬ್ರಿಟನ್ ಪ್ರವೇಶಿಸಿದ್ದರೆ ಪ್ರಸಕ್ತ ವರ್ಷ ಈಗಾಗಲೇ ಆ ಸಂಖ್ಯೆಯನ್ನು ಮೀರಿದೆ. ೨೦೨೨ರಲ್ಲಿ ಅಕ್ರಮವಾಗಿ ಬ್ರಿಟನ್ ಪ್ರವೇಶಿಸುವವರ ಸಂಖ್ಯೆಯಲ್ಲಿ ಭಾರತ ೧೦ನೇ ಸ್ಥಾನದಲ್ಲಿದ್ದರೆ ಪ್ರಸಕ್ತ ವರ್ಷ ಎರಡನೇ ಸ್ಥಾನಕ್ಕೇರಿದೆ. ಇನ್ನು ಒಂದು ಕಡೆಯಲ್ಲಿ ಪ್ರತಿಭಾವಂತ ಭಾರತೀಯರಿಗೆ ಜಾಗತಿಕ ಕಂಪೆನಿಗಳು ಮಣೆ ಹಾಕುತ್ತಿದ್ದರೆ ಮತ್ತೊಂದೆಡೆ ಉದ್ಯೋಗ ಅರಸಿ ಭಾರತದಿಂದ ಅಕ್ರಮವಾಗಿ ವಿದೇಶಕ್ಕೆ ತೆರಳುತ್ತಿರುವವರ ಸಂಖ್ಯೆಯಲ್ಲೂ ಏರಿಕೆ ಕಂಡಿದೆ.