ದಾವಣಗೆರೆ. ಮೇ.೩೧: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ, ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಹಾಗೂ ಸಂಸದ ಬ್ರಿಜ್ ಭೂಷಣ್ ಶರಣ್‌ನ ಮೇಲೆ ಕ್ರಮಕ್ಕೆ ಒತ್ತಾಯಿಸಿ
ಅಖಿಲ ಭಾರತ ಯುವಜನ ಫೆಡರೇಷನ್ ಜಿಲ್ಲಾ ಸಮಿತಿ ಪದಾಧಿಕಾರಿಗಳು ಉಪವಿಭಾಗಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.ಈ ವೇಳೆ ಪ್ರತಿಭಟನೆ ಉದ್ದೇಶಿಸಿ
ಫೆಡರೇಷನ್ ರಾಜ್ಯ ಉಪಾಧ್ಯಕ್ಷರಾದ ಕಾಂ. ಆವರಗೆರೆ ವಾಸು ಮಾತನಾಡಿ ದೆಹಲಿಯಲ್ಲಿ ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳ ನೀಡಿದ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಸಂಸದ ಬ್ರಿಜ್ ಭೂಷಣ್ ಶರಣ್ ಮೇಲೆ ಕ್ರಮಕ್ಕೆ ಆಗ್ರಹಿಸಿ ಹಲವಾರು ದಿನಗಳಿಂದ ಪ್ರತಿಭಟಿಸುತ್ತಿದ್ದರು. ಸರಕಾರ ಇವರ ಪ್ರತಿಭಟನೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದಿರುವುದಕ್ಕೆ ಅಖಿಲ ಭಾರತ ಯುವಜನ ಫೆಡರೇಷನ್ ಖಂಡಿಸುತ್ತದೆ. ದೇಶಕ್ಕೆ ಪದಕವನ್ನು ತಂದು ಕೊಟ್ಟ ಕ್ರೀಡಾಪಟುಗಳ ವಿಚಾರದಲ್ಲೆ ಈ ರೀತಿ ನಿರ್ಲಕ್ಷ?ಯ ವಹಿಸಿದರೆ ಇನ್ನು ಸಾಮಾನ್ಯರ ಗತಿ ಏನು ? ಭೇಟಿ ಬಚಾವೊ ಎಂಬುದು ಕೇವಲ ಬಾಯಿ ಮಾತಾಗಬಾರದು. ಇಂದು ದೇಶದ ಹೆಣ್ಣು ಮಕ್ಕಳು ಲೈಂಗಿಕ ಕಿರುಕುಳದ ಆರೋಪ ಮಾಡಿ ದೆಹಲಿಯ ಬೀದಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರೆ ಕೇಂದ್ರ ಸರಕಾರ ಕಣ್ಣು-ಕಿವಿ ಮುಚ್ಚಿಕುಳಿತುಕೊಳ್ಳುವ ಮೂಲಕ ಹೆಣ್ಣು ಮಕ್ಕಳನ್ನು ಅವಮಾನಿಸಲಾಗುತ್ತಿದೆ. ಆರೋಪಿ ಬ್ರಿಜ್ ಭೂಷಣ್ ಬಿಜೆಪಿ ಪಕ್ಷದ ಸಂಸದನಾಗಿರುವುದರಿಂದ ಅವನ ಮೇಲೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಮುಂದಾಗದಿರುವುದು ಖಂಡನೀಯ. ಕೂಡಲೇ ಲೈಂಗಿಕ ಕಿರುಕುಳ ಆರೋಪಿಯನ್ನು ಕುಸ್ತಿ ಫೆಡರೇಷನ್ ಸ್ಥಾನದಿಂದ ವಜಾಗೊಳಿಸಿ ಆತನ ಮೇಲೆ ತನಿಖೆ ನಡೆಸಿ ಕ್ರಮಕ್ಕೆ ಮುಂದಾಗಬೇಕು ಹಾಗೂ ಕ್ರೀಡಾಪಟುಗಳು ಸೇರಿದಂತೆ ಎಲ್ಲಾ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟಲು ಮುಂದಾಗಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ರಾಜು ಕೆರೆಯಾಗನಹಳ್ಳಿ, ಎ. ತಿಪ್ಪೇಶ್, ಗುರುಮೂರ್ತಿ ಸಿ., ಫಜುಲ್, ಹನುಮಂತಪ್ಪ ನಿಟುವಳ್ಳಿ, ಎಕೆ ಹಟ್ಟಿ ಜೀವನ ನಿಟ್ಟುವಳ್ಳಿ, ನಿಟುವಳ್ಳಿ ರಾಜು, ಅರುಣಾ, ನಿಂಗರಾಜು, ಹನುಮಂತಪ್ಪ ಯರವನಾಗತಿಹಳ್ಳಿ ಉಪಸ್ಥಿತರಿದ್ದರು.