ಬ್ರಿಜ್ ಭೂಷಣ್ ಪದಚ್ಯುತಿಗೆ ಪ್ರಿಯಾಂಕಾ ಆಗ್ರಹ

ಕುಸ್ತಿಪಟುಗಳ ಭೇಟಿ

ನವದೆಹಲಿ,ಏ.೨೯- ನ್ಯಾಯಕ್ಕಾಗಿ ಆಗ್ರಹಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ಭೇಟಿ ಮಾಡಿದ ನೈತಿಕ ಬೆಂಬಲ ನೀಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಅವರು ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಪದಚ್ಯುತಗೊಳಿಸುವಂತೆ ಆಗ್ರಹಿಸಿದ್ದಾರೆ.
ರಾಷ್ಟ್ರೀಯ ಮಹಿಳಾ ಕುಸ್ತಿ ಪಟುಗಳ ಮೇಲೆ ಲೈಂಗಿಕ ಕಿರುಕುಳದ ಗಂಭೀರ ಆರೋಪ ಇದ್ದರೂ ಬಿಜೆಪಿ ಸಂಸದರೂ ಆಗಿರುವ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಕೇಂದ್ರ ಸರ್ಕಾರ ರಕ್ಷಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಜಂತರ್ ಮಂತರ್‌ನಲ್ಲಿ ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ಭೇಟಿ ಮಾಡಿದ ಬೆಂಬಲ ಸೂಚಿಸಿ ಮಾತನಾಡಿದ ಅವರು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಪದಚ್ಯುತಗೊಳಿಸುವಂತೆ ಒತ್ತಾಯಿಸಿದ್ದಾರೆ.
ಕುಸ್ತಿ ಪಟುಗಳಾದ ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಅವರಂತಹ ಏಸ್ ಮಹಿಳಾ ಕುಸ್ತಿಪಟುಗಳ ಅಹವಾಲು ಆಲಿಸಿ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮಕ್ಕೆ ಒತ್ತಾಯಿಸಿದರು.
ಜಂತರ್ ಮಂತರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ, ದಾಖಲಾಗಿರುವ ಎಫ್‌ಐಆರ್‌ಎಸ್ ಪ್ರತಿಯನ್ನು ಕುಸ್ತಿಪಟುಗಳೊಂದಿಗೆ ಹಂಚಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
“ಈ ಹುಡುಗಿಯರು ಪದಕಗಳನ್ನು ಪಡೆದಾಗ, ಎಲ್ಲರೂ ನಮ್ಮ ದೇಶದ ಹೆಮ್ಮೆ ಎಂದು ಟ್ವೀಟ್ ಮಾಡುತ್ತಾರೆ ಆದರೆ ಈಗ ಅವರು ರಸ್ತೆಯಲ್ಲಿ ಕುಳಿತು ನ್ಯಾಯಕ್ಕಾಗಿ ಹೊರಾಟ ಮಾಡುತ್ತಿರುವಾಗ ಯಾರೂ ಅವರ ನೋವು ಕೇಳಲು ಸಿದ್ಧರಿಲ್ಲ, ಎಫ್‌ಐಆರ್‌ಎಸ್ ದಾಖಲಾಗಿದ್ದರೆ, ಅವರ ಪ್ರತಿಯನ್ನು ನೀಡಬೇಕು ಎಂದಿದ್ದಾರೆ.
ಕುಸ್ತಿ ಫೆಡರೇಷನ್ ಆಫ್ ಇಂಡಿಯಾ ಮುಖ್ಯಸ್ಥರನ್ನು ಹುದ್ದೆಯಿಂದ ವಜಾಗೊಳಿಸುವಂತೆ ಕರೆ ನೀಡಿದ ಪ್ರಿಯಾಂಕಾ ಗಾಂಧಿ,, ಈ ವ್ಯಕ್ತಿಯ ವಿರುದ್ಧ ಗಂಭೀರ ಆರೋಪಗಳಿವೆ, ಮೊದಲು ಅವರನ್ನು ರಾಜೀನಾಮೆ ನೀಡಿ ಮತ್ತು ಹುದ್ದೆಯಿಂದ ತೆಗೆದುಹಾಕಬೇಕು. ಅವರು ಆ ಹುದ್ದೆಯಲ್ಲಿರುವವರೆಗೆ, ಅವರು ಒತ್ತಡವನ್ನು ಹೇರುವುದನ್ನು ಮುಂದುವರಿಸುತ್ತಾರೆ ಎಂದಿದ್ದಾರೆ.
“ಆ ವ್ಯಕ್ತಿ ಕುಸ್ತಿಪಟುಗಳ ವೃತ್ತಿಜೀವನವನ್ನು ನಾಶಪಡಿಸುವ ಮತ್ತು ಒತ್ತಡ ಹೇರುವ ಹುದ್ದೆಯಲ್ಲಿದ್ದಾರೆ. ಎಫ್‌ಐಆರ್‌ಗಳು ಮತ್ತು ತನಿಖೆಯ ಅರ್ಥವೇನು” ಎಂದು ಅವರು ಪ್ರಶ್ನಿಸಿದ್ದಾರೆ.
“ಪ್ರಧಾನಿಯಿಂದ ನನಗೆ ಯಾವುದೇ ನಿರೀಕ್ಷೆಗಳಿಲ್ಲ, ಏಕೆಂದರೆ ಅವರು ಈ ಕುಸ್ತಿಪಟುಗಳ ಬಗ್ಗೆ ಕಾಳಜಿ ವಹಿಸಿದ್ದರೆ, ಅವರು ಕನಿಷ್ಠ ಅವರನ್ನು ಕರೆದು ಅವರೊಂದಿಗೆ ಮಾತನಾಡುತ್ತಿದ್ದರು. ಅವರು ಪದಕಗಳನ್ನು ಗೆದ್ದಾಗ ಅವರನ್ನು ಚಹಾಕ್ಕೆ ಕರೆದಿದ್ದರು. ಆದ್ದರಿಂದ ಅವರನ್ನು ಕರೆ ಮಾಡಿ , ಅವರೊಂದಿಗೆ ಮಾತನಾಡಿ, ಅವರು ಹುಡುಗಿಯರು” ಧೈರ್ಯ ಹೇಳಬೇಕಾಗಿತ್ತು ಎಂದಿದ್ದಾರೆ.