
ಬೀದರ್: ಮಾ.14:ಔರಾದ್ ತಾಲ್ಲೂಕಿನ ಹಂಗರಗಾ-ಸಾವರಗಾಂವ್ ಮಧ್ಯೆ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಉದ್ದೇಶಿಸಿರುವುದು ಅವೈಜ್ಞಾನಿಕವಾಗಿದೆ ಎಂದು ಔರಾದನ ಹಿರಿಯ ಮುಖಂಡ ಬಂಡೆಪ್ಪ ಕಂಟಿ ಹಾಗೂ ಚಾಂದೋರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೀಪಕ್ ಪಾಟೀಲ ಚಾಂದೋರಿ ಆರೋಪಿಸಿದರು.
ನಗರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನದಿ, ಕೆರೆಗಳಿಗೆ ಬ್ರಿಜ್ ಕಂ ಬ್ಯಾರೇಜ್ ಕಟ್ಟುವುದು ಸಾಮಾನ್ಯ. ಆದರೆ, ಸರ್ಕಾರದ ಹಣದ ಲೂಟಿಗಾಗಿ ಚೆಕ್‍ಡ್ಯಾಂ ನಿರ್ಮಿಸಬೇಕಾದ ನಾಲಾ ಸ್ಥಳದಲ್ಲಿ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಲಾಗುತ್ತಿದೆ ಎಂದು ದೂರಿದರು.
ಬ್ರಿಜ್ ಕಂ ಬ್ಯಾರೇಜ್ ನಿರ್ಮಿಸಲಿರುವ ಪ್ರದೇಶದಲ್ಲಿ ಫಲವತ್ತಾದ ಭೂಮಿ ಇಲ್ಲ. ಗುಡ್ಡ ಗಾಡು ಪ್ರದೇಶ ಇದೆ. ಸಮೀಪದಲ್ಲಿ ಈಗಾಗಲೇ ಒಂದು ಬ್ರಿಜ್ ಕಂ ಬ್ಯಾರೇಜ್ ಇದೆ. ಹೀಗಾಗಿ ಹೊಸದಾಗಿ ಬ್ರಿಜ್ ಕಂ ಬ್ಯಾರೇಜ್ ನಿರ್ಮಿಸುವ ಅವಶ್ಯಕತೆಯೇ ಇಲ್ಲ ಎಂದು ಹೇಳಿದರು.
ಪಶು ಸಂಗೋಪನೆ ಸಚಿವರಾದ ಔರಾದ್ ಶಾಸಕ ಪ್ರಭು ಚವಾಣ್ ಹಾಗೂ ಅವರ ಸಹೋದರರ ತಲಾ 3 ಎಕರೆ ಜಮೀನು ಇರುವ ಕಾರಣ ಇಲ್ಲಿ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಸುತ್ತಮುತ್ತಲಿನ ರೈತರಿಗೆ ಯಾವುದೇ ಅನುಕೂಲ ಇಲ್ಲ. ಆದರೆ, ಕೇವಲ 2 ಕಿ.ಮೀ. ದೂರದಲ್ಲೇ ಮಹಾರಾಷ್ಟ್ರ ಇದೆ. ಇದರಿಂದ ಮಹಾರಾಷ್ಟ್ರಕ್ಕೆ ಲಾಭವಾಗಲಿದೆ ಎಂದು ತಿಳಿಸಿದರು.
ಭಾಲ್ಕಿ ತಾಲ್ಲೂಕಿನ ಮಾಣಿಕೇಶ್ವರ, ಜೀಗ್ರ್ಯಾಳ್, ಕೊಂಗಳಿ ಹಾಗೂ ಚಂದಾಪುರದಲ್ಲಿ ಮಾಂಜ್ರಾ ನದಿಗೆ ಅಡ್ಡಲಾಗಿ ತಲಾ ರೂ. 50 ಕೋಟಿ ವೆಚ್ಚದಲ್ಲಿ ಬ್ರಿಜ್ ಕಂ ಬ್ಯಾರೆಜ್‍ಗಳನ್ನು ನಿರ್ಮಿಸಲಾಗಿದೆ. ಅವುಗಳಿಂದ ಹತ್ತು ಸಾವಿರ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ನೆರವಾಗಿದೆ. ಅನೇಕ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವೂ ದೊರಕಿದೆ. ಇಲ್ಲಿ ರಸ್ತೆ, ಶಾಲಾ ಕಟ್ಟಡ ಸೇರಿ ಮೂಲಸೌಕರ್ಯಕ್ಕೆ ಬಳಸಬೇಕಿದ್ದ ಕೆಕೆಆರ್‍ಡಿಬಿಯ ರೂ. 69 ಕೋಟಿಯಲ್ಲಿ ನಾಲಾಕ್ಕೆ ಬ್ರಿಜ್ ಕಂ ಬ್ಯಾರೇಜ್ ನಿರ್ಮಿಸುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದರು.
ನಾಲಾಕ್ಕೆ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣದಿಂದ ಎಷ್ಟು ಟಿಎಂಸಿ ಅಡಿ ನೀರು ಸಂಗ್ರಹವಾಗಲಿದೆ, ಎಷ್ಟು ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಸಿಗಲಿದೆ, ಎಷ್ಟು ರೈತರಿಗೆ ಲಾಭವಾಗಲಿದೆ ಎನ್ನುವ ಸ್ಪಷ್ಟ ಕಲ್ಪನೆ ಇಲ್ಲ. ತಾಂತ್ರಿಕ ತಂಡದ ವರದಿಯೇ ಅವೈಜ್ಞಾನಿಕವಾಗಿದೆ. ಇದರಲ್ಲಿ ಕೇವಲ ಶಾಸಕರ ವೈಯಕ್ತಿಕ ಸ್ವಾರ್ಥ ಅಡಗಿದೆ ಎಂದು ಆಪಾದಿಸಿದರು.
ದಿ. ಮಾಣಿಕರಾವ್ ಪಾಟೀಲ ಅವರು ಸಚಿವರಾಗಿದ್ದಾಗ ತಮ್ಮ ಊರಲ್ಲಿ ಬ್ರಿಜ್ ಕಂ ಬ್ಯಾರೇಜ್ ನಿರ್ಮಿಸಿರಲಿಲ್ಲ. ರೈತರ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ಭಂಡಾರಕುಮಟಾದಲ್ಲಿ ಬ್ರಿಜ್ ಕಂ ಬ್ಯಾರೇಜ್ ನಿರ್ಮಿಸಿದ್ದರು. ರೂ. 69 ಕೋಟಿಯಲ್ಲಿ ಔರಾದ್ ತಾಲ್ಲೂಕಿನ ಅರ್ಧದಷ್ಟು ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬಹುದಿತ್ತು. ರೂ. 5 ಕೋಟಿ ಖರ್ಚು ಮಾಡಿದರೂ, ಹಾಲಹಳ್ಳಿ ಸಮೀಪದ ಬ್ಯಾರೇಜ್‍ನಿಂದ ಔರಾದ್ ತಾಲ್ಲೂಕಿನ ಅನೇಕ ಹಳ್ಳಿಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತಿತ್ತು. ಅದನ್ನು ಬಿಟ್ಟು ಸರ್ಕಾರದ ಹಣ ಹೊಡೆಯಲು ಅವಶ್ಯಕತೆ ಇಲ್ಲದ ಸ್ಥಳದಲ್ಲಿ ಬ್ಯಾರೇಜ್ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿದರು.
ಬ್ಯಾರೇಜ್ ಟೆಂಡರ್ ಪ್ರಕ್ರಿಯೆಯಲ್ಲಿ ಗೋಲ್‍ಮಾಲ್ ನಡೆದಿದೆ. ಯಾವುದೇ ಅರ್ಹತೆ ಇಲ್ಲದಿದ್ದರೂ, ಮೂವರು ಗುತ್ತಿಗೆದಾರರನ್ನು ಟೆಕ್ನಿಕಲ್ ಬಿಡ್ ಹಂತದಲ್ಲಿ ಪಾಸ್ ಮಾಡಿ, ಮುಂದಿನ ಹಂತಕ್ಕೆ ಪರಿಗಣಿಸಲಾಗಿದೆ. ಕ್ಷೇತ್ರದ ಶಾಸಕರು ಹಾಗೂ ಅಧಿಕಾರಿಗಳು ಅವ್ಯವಹಾರದಲ್ಲಿ ಶಾಮೀಲಾಗಿದ್ದಾರೆ. ಈಗಾಗಲೇ ಟೆಂಡರ್ ಅಕ್ರಮ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ಕೊಡಲಾಗಿದೆ ಎಂದು ತಿಳಿಸಿದರು.
ಕೂಡಲೇ ಉನ್ನತ ಮಟ್ಟದ ತಂಡದಿಂದ ಬ್ಯಾರೇಜ್ ಸ್ಥಳ ಪರಿಶೀಲನೆ ನಡೆಸಬೇಕು. ಟೆಂಡರ್ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಸಂಬಂಧಪಟ್ಟವರು ತಕ್ಷಣ ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯ ಹಾಗೂ ಲೋಕಾಯುಕ್ತರ ಮೊರೆ ಹೋಗಲಾಗುವುದು ಎಂದು ಎಚ್ಚರಿಸಿದರು.
ಮುಖಂಡರಾದ ಚಂದ್ರಶೇಖರ ದೇಶಮುಖ, ಶ್ರೀರಂಗ ಪರಿಹಾರ, ಬಾಳಾಸಾಹೇಬ ರಾಠೋಡ್, ಕಿರಣ ಪಾಟೀಲ ಚಿಕ್ಲಿ ಇದ್ದರು.