
ನವದೆಹಲಿ/ಜೋಹಾನ್ಸ್ ಬರ್ಗ್, ಆ.೨೩- ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್‌ನಲ್ಲಿ ನಡೆಯುತ್ತಿರುವ ೧೫ನೇ ಬ್ರಿಕ್ಸ್ ಶೃಂಗ ಸಭೆಯಲ್ಲಿ ಭಾಗಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ಪರಿಸ್ಪರ ಚರ್ಚೆ ನಡೆಸುತ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ.
ಶೃಂಗಸಭೆಯ ಮಧ್ಯೆ ಎರಡೂ ದೇಶದ ಮುಖ್ಯಸ್ಥರು, ಭಾರತ-ಚೀನಾ ಗಡಿ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.
ಬ್ರಿಕ್ಸ್ ನಾಯಕರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದರು, ಬಿಡುವಿನ ವೇಳೆ ಚೀನಾ ಅಧ್ಯಕ್ಷರ ಜೊತೆ ಚರ್ಚೆ ನಡೆಸಲಿದ್ದಾರಾ ಎನ್ನುವುದು ಇನ್ನಷ್ಟು ಸ್ಪಷ್ಟವಾಗಬೇಕಾಗಿದೆ.
ಬ್ರಿಕ್ಸ್ ಶೃಂಗಸಭೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರು ಬ್ರಿಕ್ಸ್ ನಾಯಕರೊಂದಿಗೆ ಜಾಗತಿಕ ಬೆಳವಣಿಗೆಗಳ ಕುರಿತು ಚರ್ಚೆ ಮತ್ತು ಜಾಗತಿಕ ಸವಾಲುಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ಬ್ರಿಕ್ಸ್ ವೇದಿಕೆ ಬಳಸಿಕೊಳ್ಳುತ್ತಾರೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಿಶ್ವಾಸ ವ್ಯಕ್ತಪಡಿಸಿದೆ.
ಮಾತುಕತೆ ತಳ್ಳಿಹಾಕುವಂತಿಲ್ಲ:
ಅಧಿಕೃತ ಮೂಲಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ನಡುವೆ ಮಾತುಕತೆ ನಡೆಯುವುದನ್ನು ತಳ್ಳಿ ಹಾಕುವಂತಿಲ್ಲ ಎನ್ನಲಾಗಿದೆ.
ಇಬ್ಬರು ನಾಯಕರ ನಡುವಿನ ಫೊ?ಟೋ ಆಪ್‌ಗಳು ಅಥವಾ ಸಾಂದರ್ಭಿಕ ಮಾತುಕತೆಗಳನ್ನು ತಳ್ಳಿಹಾಕಲಿಲ್ಲ ಆದರೆ ರಚನಾತ್ಮಕ ದ್ವಿಪಕ್ಷೀಯ ಸಭೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸದ್ಯದವರೆಗೆ ಲಭ್ಯವಾಗಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ಹಂಚಿಕೊಂಡಿದೆ.
ಇರಾನ್, ಇಥಿಯೋಪಿಯಾ ಮತ್ತು ಮೊಜಾಂಬಿಕ್ ನಾಯಕರೊಂದಿಗೆ ನಾಳೆ ಪ್ರಧಾನಿ ನ ಮೋದಿ ಐದು ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ ಆದರೆ ಅವರು ಔಪಚಾರಿಕವಾಗಿ ಭೇಟಿಯಾಗಲಿರುವ ಉಳಿದ ಎರಡು ದೇಶಗಳ ಹೆಸರನ್ನು ಸರ್ಕಾರ ಬಹಿರಂಗಪಡಿಸಿಲ್ಲ ಎನ್ನಲಾಗಿದೆ.