
ನವದೆಹಲಿ,ಆ.೨೨- ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿ ನಡೆಯಲಿರುವ ೧೫ನೇ ಬ್ರಿಕ್ಸ್ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಮೂರು ದಿನಗಳ ಪ್ರವಾಸ ಆರಂಭಿಸಿದ್ದಾರೆ.ಬೆಳಗ್ಗೆ ೭ ಗಂಟೆಗೆ ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳಿದ ಪ್ರಧಾನಿ ನರೇಂದ್ರ ಮೋದಿ ಅವರು ಸಂಜೆ ೫.೧೫ರ ಸುಮಾರಿಗೆ ಜೋಹಾನ್ಸ್ ಬರ್ಗ್ ತಲುಪಲಿದ್ದಾರೆ. ಎಂದು ಪ್ರಧಾನ ಮಂತ್ರಿಗಳ ಕಾರ್ಯಾಲಯ ತಿಳಿಸಿದೆ.ಬ್ರಿಕ್ಸ್ ಶೃಂಗಸಭೆಯ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ದೇಶಗಳ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ. ಅಲ್ಲದೆ ಬ್ರಿಕ್ಸ್-ಆಫ್ರಿಕಾ ಔಟ್ರೀಚ್ ಮತ್ತು ಬ್ರಿಕ್ಸ್ ಪ್ಲಸ್ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿದೆ.ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಸೇರಿದಂತೆ ಹಲವು ದೇಶಗಳ ನಾಯಕರು ಬ್ರಿಕ್ಸ್ ಶೃಂಗ ಸಭೆಯಲ್ಲಿ ಭಾಗಿಯಾಗಲಿದ್ದು ಅವರಲ್ಲಿ ಕೆಲವು ದೇಶಗಳ ಅಧ್ಯಕ್ಷರ ಜೊತೆಪ್ರಧಾನಿಯವರು ದ್ವಿಪಕ್ಷೀಯ ಮಾತುಕತೆ ನಡೆಸುವ ನಿರೀಕ್ಷೆಯಿದೆ. ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.
ಇದೇ ವೇಳೆ ಭಾರತ-ಚೀನಾ ಗಡಿ ಸಮಸ್ಯೆ ಬಗ್ಗೆ ಕ್ಸಿ ಜಿನ್ ಪಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಚರ್ಚೆ ನಡೆಸುವ ಸಾಧ್ಯತೆಗಳು ಇವೆ ಎನ್ನಲಾಗಿದೆ.
ಮೂರು ದಿನಗಳ ಪ್ರವಾಸ
“ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಪೋಸಾ ನೇತೃತ್ವದಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿರುವ ೧೫ ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ದಕ್ಷಿಣ ಆಫ್ರಿಕಾ ಗಣರಾಜ್ಯಕ್ಕೆ ಭೇಟಿ ನೀಡುತ್ತಿದ್ದೇನೆ” ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾಕ್ಕೆ ತೆರಳುವ ಮುನ್ನ ಹೇಳಿಕೆ ಬಿಡುಗಡೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಭೇಟಿಯ ಸಮಯದಲ್ಲಿ ಅನೇಕ ಚರ್ಚೆಗಳು ನಡೆಯಲಿವೆ ಎಂದಿದ್ಧಾರೆ.