ಬ್ರಾಹ್ಮಣ ಗಾಯಿತ್ರಿ ಭವನ ನಿರ್ಮಾಣಕ್ಕೆ ಸಹಕಾರ

ರಾಯಚೂರು.ಜ.10- ಬ್ರಾಹ್ಮಣ ಸಮಾಜದ ಗಾಯಿತ್ರಿ ಭವನ ಕಟ್ಟಡ ನನ್ನ ಅವಧಿಯಲ್ಲಿಯೇ ಪೂರ್ಣಗೊಳಿಸಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಶಾಸಕ ಡಾ.ಶಿವರಾಜ ಪಾಟೀಲ್ ಅವರು ಹೇಳಿದರು.
ಅವರಿಂದು ನಗರದ ಯರಗೇರಾ ರಸ್ತೆಯಲ್ಲಿ ಬರುವ ಲೇಔಟ್‌ವೊಂದರಲ್ಲಿ ಬ್ರಾಹ್ಮಣ ಗಾಯಿತ್ರಿ ಭವನ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ, ಮಾತನಾಡಿದರು. ಬ್ರಾಹ್ಮಣ ಸಮಾಜದಿಂದ ಸಾಮಾನ್ಯವಾಗಿ ಯಾವುದೇ ಬೇಡಿಕೆಗಳು ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಈ ಭವನಕ್ಕಾಗಿ ಬೇಡಿಕೆ ಮಂಡಿಸಿದ್ದು, ಈ ಕಟ್ಟಡ ಸುಸಜ್ಜಿತ ರೀತಿಯಲ್ಲಿ ನಿರ್ಮಾಣಗೊಳ್ಳಲು ಬೇಕಾದ ಎಲ್ಲಾ ಸಹಕಾರ ನೀಡುವುದಾಗಿ ಹೇಳಿದರು. ಮೊದಲ ಹಂತದಲ್ಲಿ 25 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿದೆ. ಹಂತ ಹಂತವಾಗಿ ಉಳಿದ ನೆರವು ನೀಡಲಾಗುತ್ತದೆಂದು ಭರವಸೆ ನೀಡಿದರು. ಬ್ರಾಹ್ಮಣ ಸಮಾಜದ ಕಟ್ಟಡ ಕಾಮಗಾರಿ ಉತ್ತಮ ಗುಣಮುಟ್ಟದಿಂದ ನಡೆಯುವ ಮೂಲಕ ಇದೊಂದು ಸುಸಜ್ಜಿತ ಕಟ್ಟಡವಾಗಿ ಈ ಸಮಾಜದ ಕಾರ್ಯಕ್ರಮಗಳಿಗೆ ಬಳಕೆಯಾಗಲಿದೆಂದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷರು ಹಾಗೂ ಆರ್‌ಡಿಎ ಮಾಜಿ ಅಧ್ಯಕ್ಷರಾದ ಜಗನ್ನಾಥ ಕುಲಕರ್ಣಿ ಅವರು ಮಾತನಾಡುತ್ತಾ, ಗಾಯಿತ್ರಿ ಭವನ ನಿರ್ಮಾಣ ನಮ್ಮ ಸಮುದಾಯದ ಪ್ರಮುಖ ಗುರಿಯಾಗಿದೆ. ಈ ಭವನವನ್ನು ಸುಸಜ್ಜಿತವಾಗಿ ನಿರ್ಮಿಸಲು ಸಹಕರಿಸುವಂತೆ ಶಾಸಕರಲ್ಲಿ ಕೋರಿದರು. ಬ್ರಾಹ್ಮಣ ಸಮಾಜ ಪ್ರತಿ ಚುನಾವಣೆಯಲ್ಲೂ ತಮ್ಮನ್ನು ಬೆಂಬಲಿಸಿದೆ ಎನ್ನುವುದನ್ನು ಸ್ಮರಿಸಿದ ಅವರು, ಈ ಕಟ್ಟಡ ನಿರ್ಮಾಣಕ್ಕೆ ಸಹಕರಿಸಲು ಕೋರಿದರು.
ಈ ಸಂದರ್ಭದಲ್ಲಿ ಆರ್‌ಡಿಎ ಅಧ್ಯಕ್ಷ ವೈ.ಗೋಪಾಲರೆಡ್ಡಿ, ಗಿರಿ ಕನಕವೀಡು, ಮುರಳಿಧರ, ರಮೇಶ, ಶಶಿರಾಜ, ಕಡಗೋಳ ಆಂಜಿನೇಯ್ಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.