
ಕಲಬುರಗಿ,ಮಾ.16: ರಾಜ್ಯದಲ್ಲಿರುವ ಆರ್ಥಿಕವಾಗಿ ದುರ್ಬಲ ವರ್ಗದ ಬ್ರಾಹ್ಮಣ ಸಮಾಜದವರಿಗೆ ಶೇಕಡಾ 10ರಷ್ಟು ಮೀಸಲಾತಿ (ಇಡಬ್ಲುಎಸ್) ನೀಡಲು ಒತ್ತಾಯಿಸಿ ಗುರುವಾರ ಬ್ರಾಹ್ಮೀಣ್ ಆರ್ಗನೈಸೇಷನ್ ಆಫ್ ಇಂಡಿಯಾ ಜಿಲ್ಲಾ ಘಟಕದ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ಮಾಡಿದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮುಖಂಡ ಕೃಷ್ಣಾರೆಡ್ಡಿ ಮತ್ತು ಆಮ್ ಆದ್ಮಿ ಪಕ್ಷದ ಮುಖಂಡ ಸಿದ್ದು ಪಾಟೀಲ್ ತೆಗನೂರ್ ಅವರು ಧರಣಿ ಸ್ಥಳಕ್ಕೆ ಭೇಟಿ ನೀಡಿ ಬೇಡಿಕೆಯನ್ನು ಬೆಂಬಲಿಸಿದರು.
ಜೆಡಿಎಸ್ ಮುಖಂಡ ಕೃಷ್ಣಾರೆಡ್ಡಿ ಅವರು ಮಾತನಾಡಿ, ಕೇಂದ್ರ ಸರ್ಕಾರವು ಈಗಾಗಲೇ ಮೇಲ್ವರ್ಗದ ಆರ್ಧಿಕವಾಗಿ ಹಿಂದುಳಿದವರಿಗೆ ಶೇಕಡಾ 10ರಷ್ಟು ಮೀಸಲಾತಿಯನ್ನು ಘೋಷಿಸಿದೆ. ಕರ್ನಾಟಕದಲ್ಲಿ ಅದು ಜಾರಿಯಾಗಿಲ್ಲ. ಕೇಂದ್ರದಲ್ಲೂ ಹಾಗೂ ರಾಜ್ಯದಲ್ಲಿಯೂ ಸಹ ಬಿಜೆಪಿ ಸರ್ಕಾರ ಇದ್ದು, ಹುಸಿ ಭರವಸೆ ಕೊಟ್ಟಿದ್ದು ಖಂಡನಾರ್ಹ ಎಂದು ಆಕ್ಷೇಪಿಸಿದರು.
ದಕ್ಷಿಣ ಕ್ಷೇತ್ರದ ಶಾಸಕರು ಇಡೀ ಕ್ಷೇತ್ರವನ್ನು ಹದಿನೈದು ವರ್ಷಗಳಿಂದ ಪ್ರತಿನಿಧಿಸುತ್ತಿದ್ದಾರೆ. ಬ್ರಾಹ್ಮಣ ಸಮಾಜದವರು ತಮ್ಮ ಬೇಡಿಕೆಗಳಿಗೆ ಆಗ್ರಹಿಸಿ ಹೋರಾಟ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಶಾಸಕರು ಬೇಡಿಕೆಯನ್ನು ಪರಿಗಣಿಸಿ ತಮ್ಮ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಅವರು ಒತ್ತಾಯಿಸಿದರು.
ನಾವಂತೂ ಬೇಡಿಕೆಗೆ ಬೆಂಬಲಿಸುತ್ತೇವೆ. ಅವರ ಹೋರಾಟದಲ್ಲಿ ನಾವೂ ಸಹ ಭಾಗವಹಿಸುತ್ತೇವೆ. ಬೇಡಿಕೆ ಇಡೇರುವವರೆಗೂ ಹೋರಾಟ ಮುಂದುವರೆಸುತ್ತೇವೆ ಎಂದು ಅವರು ಎಚ್ಚರಿಸಿದರು.
ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ, ಪ್ರಧಾನಿ ನರೇಂದ್ರ ಮೋದಿ ಅವರು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಶೇಕಡಾ 10ರಷ್ಟು ಮೀಸಲಾತಿ ಜಾರಿಗೆ ತಂದು ಈಗಾಗಲೇ ನಾಲ್ಕು ವರ್ಷಗಳಾಗಿವೆ. ರಾಜ್ಯದಲ್ಲಿ ಇಡಬ್ಲೂಎಸ್ ಜಾರಿಗೆ ತರಲು ರಾಜ್ಯ ಸರ್ಕಾರ ವಿಳಂಬ ಮಾಡುತ್ತಿರುವುದು ರಾಜ್ಯ ವಿಪ್ರ ಸಮಾಜದಲ್ಲಿ ಅಸಮಾಧಾನಕ್ಕೆ ಎಡೆ ಮಾಡಿಕೊಟ್ಟಿದೆ. ರಾಜ್ಯ ಸರ್ಕಾರದ ವಿಪ್ರ ವಿರೋಧಿ ನೀತಿ ಖಂಡನೀಯ ಎಂದು ಆಕ್ಷೇಪಿಸಿದರು.
ಬರುವಂತಹ ವಿಧಾನ ಸಭಾ ಚುನಾವಣೆಯಲ್ಲಿ ಮೀಸಲಾತಿ ನೀಡದ ರಾಜ್ಯ ಸರಕಾರದ ಮೇಲೆ ಇದರ ಪರಿಣಾಮ ಬೀರುವಲ್ಲಿ ಯಾವುದೇ ಸಂಶಯವಿಲ್ಲ. ಚುನಾವಣೆ ನೀತಿ ಸಂಹಿತೆ ಜಾರಿಗೆಯಾಗುವದರೊಳಗೆ ಇಡಬ್ಲೂಎಸ್ ಜಾರಿಗೆಯಾಗದಿದ್ದರೆ, ಬರುವ ವಿಧಾಸಭಾ ಚುನಾವಣೆಯಲ್ಲಿ ಸಂಘಟನೆಯು ರಾಜ್ಯಾದ್ಯಂತ ವಿಪ್ರರಿಗೆ ಜಾಗೃತಿ ಮೂಡಿಸುವ ಮೂಲಕ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ನಿರ್ಧರಿಸಿದ್ದೇವೆ ಎಂದು ಅವರು ಎಚ್ಚರಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಇಡಬ್ಲೂಎಸ್ ಜಾರಿಗೊಳಿಸಿದ್ದನ್ನು ಯಥಾವತ್ತಾಗಿ ರಾಜ್ಯ ಸರ್ಕಾರ ಯಾವುದೇ ತಿದ್ದುಪಡಿ ಇಲ್ಲದೆ ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ವೆಂಕಟೇಶ್ ಕುಲಕರ್ಣಿ, ರಾಜ್ಯಾಧ್ಯಕ್ಷ ರವೀಂದ್ರ ಕುಲಕರ್ಣಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಸುಮಂಗಲಾ ಚಕ್ರವರ್ತಿ ಸೇರಿದಂತೆ ಹಲವಾರು ಬ್ರಾಹ್ಮಣ ಸಮಾಜದವರು ಪಾಲ್ಗೊಂಡಿದ್ದರು.