
ರಾಯಚೂರು, ಸೆ.೦೫- ಬ್ರಹ್ಮ ವಿಷ್ಣು ಮಹೇಶ್ವರನಂತೆ ಶಿಕ್ಷಕರು ಕೂಡ ಸಮಾನರು ಎಂದು ಹೇಳುವುದು ತಪ್ಪಾಗಲಾರದೆಂದು ಶಾಸಕ ಬಸನಗೌಡ ದದ್ದಲ್ ಅವರು ಹೇಳಿದರು.
ಅವರಿಂದು ನಗರದ ಕೃಷಿ ವಿಶ್ವವಿದ್ಯಾಲಯದ ಪ್ರೇಕ್ಷಕ ಗೃಹದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದೇವರು ಎಷ್ಟು ಶ್ರೇಷ್ಠ ಅಷ್ಟೇ ಶಿಕ್ಷಕರು ಕೂಡ ಶ್ರೇಷ್ಠರು. ನವ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಅತ್ಯಂತ ಪ್ರಮುಖವಾದದು ಎಂದರು.
ಪೋಷಕರು ಮಕ್ಕಳಿಗೆ ಸಂಸ್ಕಾರ ಕಳಿಸಿದರೆ ಗುರುವು ಸಂಸ್ಕಾರದ ಜೊತೆಗೆ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುತ್ತಾರೆ ಎಂದರು.
ಶಿಕ್ಷಣ ಎನ್ನುವುದು ಸಾಮಾಜಿಕ ಸಂರಚನೆಯಲ್ಲಿ ಮಹತ್ವದ ಪರಿವರ್ತನೆ ತರುವಂಥ ದಿವ್ಯಾಸ್ತ್ರ, ಮಕ್ಕಳ ಬೌದ್ಧಿಕ ವಿಕಾಸಕ್ಕೆ, ಲೋಕಜ್ಞಾನ ಹೊಂದುವುದಕ್ಕೆ, ಬದುಕಿನ ಪೂರ್ಣತೆ ಹೊಂದಲು ಪ್ರತಿಯೊಬ್ಬ ಪ್ರಜೆಗೂ ಶಿಕ್ಷಣ ಅತ್ಯವಶ್ಯ.
ವ್ಯಕ್ತಿ ಉನ್ನತ ಸ್ಥಾನದಲ್ಲಿ ಬೆಳೆದರೂ ವಿದ್ಯೆ ಕಲಿಸಿದ ಶಿಕ್ಷಕರಿಗೆ ಗೌರವ ನೀಡಬೇಕು. ಆಗ ಮಾತ್ರ ಶಿಕ್ಷಕರ ದಿನಾಚರಣೆಗೆ ಒಂದು ಅರ್ಥ ಸಿಗುತ್ತದೆ ಎಂದರು.
ಸಮಾಜ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅನನ್ಯ. ಶಿಕ್ಷಣದೊಂದಿಗೆ ಮಕ್ಕಳ ಭವಿಷ್ಯ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಶ್ರೇಷ್ಠವಾದದು. ಶಿಕ್ಷಕರ ಕೊರತೆ ಕೂಗು ಜಿಲ್ಲೆಯಲ್ಲಿ ಕೇಳಿಬರುತ್ತದೆ. ಶೀಘ್ರ ಅತಿಥಿ ಶಿಕ್ಷಕರ ಹಾಗೂ ಖಾಯಂ ಶಿಕ್ಷಕರನ್ನು ನೇಮಕಾತಿಗೆ ಸರಕಾರ ಬದ್ದವಾಗಿದೆ ಎಂದರು. ಗ್ರಾಮೀಣ ಪ್ರದೇಶದ ಶಿಕ್ಷಕರಿಗೆ ಸೇವೆ ಸಲ್ಲಿಸಲು ತೊಂದರೆಯಾಗುತ್ತದೆ. ಆದ್ದರಿಂದ ಗುರುಭವನ ನಿರ್ಮಾಣ ಮಾಡಲು ಸರ್ಕಾರದೊಂದಿಗೆ ಚರ್ಚೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಾಸಕ ಶಿವರಾಜ ಪಾಟೀಲ್, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ಬಶೀರ್ ಅಹ್ಮದ್, ಸುರೇಶ ಹುಗ್ಗಿ, ಇಂದಿರಾ, ಬಿಇಒ ಚಂದ್ರಶೇಖರ ಬಂಡಾರಿ, ಸೇರಿದಂತೆ ಉಪಸ್ಥಿತರಿದ್ದರು.