ಬ್ರಹ್ಮಸೂತ್ರ ಪರವಿದ್ಯಯಾಗಿದೆ-ಪಂ.ವರದಾಚಾರ್ಯ

ಬಾಗಲಕೋಟೆ ನ. 8 : ವೇದಗಳು ಪರವಿದ್ಯೆಯಲ್ಲ ಬ್ರಹ್ಮಸೂತ್ರ ಪರವಿದ್ಯೆಯಾಗಿದೆ ಶ್ರೀಸತ್ಯಪ್ರಮೋದತೀರ್ಥರು ಇದನ್ನು ಸಮರ್ಥವಾಗಿ ನಿರೂಪಿಸಿದ್ದಾರೆಂದು ಪಂ.ವರದಾಚಾರ್ಯ ಜಾಲಿಹಾಳ ಹೇಳಿದ್ದಾರೆ.
ಶ್ರೀ ಸತ್ಯಪ್ರಮೋದತೀರ್ಥ ಶ್ರೀಪಾದಂಗಳವರ ಆರಾಧನಾ ಮಹೋತ್ಸವ ನಿಮಿತ್ಯ ಶ್ರೀ ಸತ್ಯಬೋಧರಾಯರ ಮಠದಲ್ಲಿ ಶ್ರೀ ವಿಶ್ವ ಮಧ್ವ ಮಹಾಪರಿಷತ್, ಉತ್ತರಾಧಿಮಠ, ಶ್ರೀಸತ್ಯಬೋಧರಾಯರ ಮಠ ಸಂಯುಕ್ತಾಶ್ರಯದಲ್ಲಿ ನ್ಯಾಯಸುಧಾ ಮಂಡನದಲ್ಲಿ ಪರವಿದ್ಯಾ ವಿಚಾರ ಕುರಿತು ಅಧ್ಯಕ್ಷತೆ ವಹಿಸಿ ಸಮಾರೋಪ ಭಾಷಣ ಮಾಡಿದ ಅವರು ಅಪೂರ್ವವಾದ ವಿಷಯಗಳನ್ನು ಉದಾಹರಿಸಿ ನ್ಯಾಯಸುಧಾ ಮಂಡನದಲ್ಲಿ ಶ್ರೀಪಾದರು ಸಮರ್ಥವಾಗಿ ನಿರೂಪಿಸಿ ಧಾರ್ಮಿಕ ಜಗತ್ತಿಗೆ ಬೆಳಕು ನೀಡಿದ್ದಾರೆ ಎಂದರು.
ಪಂ.ಸಂಜೀವಾಚಾರ್ಯ ಬುರ್ಲಿ ಅವರು ವೇದಗಳು ಪರವಿದ್ಯಾಯಾಗಿದೆ ಎಂದು ಪೂರ್ವಪಕ್ಷದ ಪರವಾಗಿ ವಿಚಾರ ಮಂಡನ ಮಾಡಿ ಸೈದ್ದಾಂತಿಕವಾಗಿ ನಿರೂಪಿಸಿದರು. ಆದರೆ ಈ ವಿಚಾರವನ್ನು ಒಪ್ಪದ ಖ್ಯಾತ ವಿಧ್ವಾಂಸರಾದ ಡಾ.ಭೀಮಸೇನಾಚಾರ್ಯ ಪಾಂಡುರಂಗಿ ಅವರು ಬ್ರಹ್ಮ ಸೂತ್ರಗಳೇ ಪರವಿದ್ಯೆ ಎಂದು ಹೇಳಿ ಶ್ರೀಸತ್ಯಬೋದತೀರ್ಥ ಶ್ರೀಪಾದಂಗಳವರ ವಿಚಾರಗಳನ್ನು ಮಂಡಿಸಿ ಸಮರ್ಥಿಸಿಕೊಂಡರು. ಅಂತೀಮವಾಗಿ ಬ್ರಹ್ಮಸೂತ್ರ ಪರವಿದ್ಯೆ ಎಂದು ನಿರೂಪಣೆಯಾಯಿತು. ಸಂಚಾಲಕರಾದ ಡಾ.ರಘೋತ್ತಮಾಚಾರ್ಯ ನಾಗಸಂಪಗಿ ಅವರು ಇದೊಂದು ಅಪೂರ್ವ ವಿಚಾರಗೋಷ್ಟಿ ಎಂದರು.
ರವಿವಾರ ಬೆಳಿಗ್ಗೆ ಶ್ರೀಸತ್ಯಬೋದರಾಯರ ಮೃತಿಕಾ ವೃಂದಾವನಕ್ಕೆ ಅಭಿಷೇಕ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು, ಪಂ.ಶ್ರೀನಿಧಿ ಆಚಾರ್ಯ ಬಲ್ಲರವಾಡ, ಪಂ ಸುಜೀಂದ್ರಾಚಾರ್ಯ ಮನಗೂಳಿ ಅವರು ಶ್ರೀ ಸತ್ಯಪ್ರಮೋದತೀರ್ಥರ ತಪಸ್ಸು, ಧಾರ್ಮಿಕ ಶಕ್ತಿ, ಮಂತ್ರಾಕ್ಷತೆ ಶಕ್ತಿ ಕುರಿತು ವಿವರಿಸಿ ಅವರ ಅಗಾಧ ಪಾಂಡಿತ್ಯ ಸಮಾಜವನ್ನು ಅಂಧಕಾರದಿಂದ ಮುಕ್ತ ಮಾಡಿ ಬೆಳಕು ನೀಡಿದೆ ಎಂದರು. ಸಂಜೆ ವಿವಿಧ ಮಹಿಳಾ ಮಂಡಳಿಯಿಂದ ಭಜನೆ, ಶ್ರೀ ಸತ್ಯಬೋಧರಾಯರ ಮಠದಲ್ಲಿ ಕಾರ್ತಿಕ ದೀಪೋತ್ಸವ ನಡೆಯಿತು. ಪಂ.ಬಿಂದಾಚಾರ್ಯ ನಾಗಸಂಪಗಿ ಅವರು ಉಪನ್ಯಾಸ ನೀಡಿದರು.
ಆರ್.ಆರ್.ಕುಲಕರ್ಣಿ, ರಾಮರಾವ ದೇಸಾಯಿ, ಬಾಬುರಾವ ಜಂಬಗಿ, ಆರ್.ಎಸ್.ಕುಲಕರ್ಣಿ, ನವರತ್ನಆಚಾರ್ಯ ಮತ್ತಿತರರು ನೇತೃತ್ವ ವಹಿಸಿದ್ದರು.