ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ನಿಗಮಕ್ಕೆ ಅನುದಾನ ಏನಿಲ್ಲ!ರಾಜ್ಯದ ಈಡಿಗ -ಬಿಲ್ಲವರಿಗೆ ಸರಕಾರದಿಂದ ಮಹಾ ಮೋಸ – ಆಕ್ರೋಶ

ಕಲಬುರಗಿ:ಫೆ.18:ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಸರಕಾರವು ಬ್ರಹ್ಮಶ್ರೀ ಶ್ರೀನಾರಾಯಣ ಗುರು ಈಡಿಗ ಅಭಿವೃದ್ಧಿ ನಿಗಮಕ್ಕೆ ಈ ಸಾಲಿನ ಬಜೆಟ್ ನಲ್ಲಿ ಅನುದಾನ ನೀಡದೆ ರಾಜ್ಯದ 70 ಲಕ್ಷ ಜನ ಸಮುದಾಯಕ್ಕೆ ಮಹಾ ಮೋಸ ಮಾಡಿದೆ ಎಂದು ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿ ತೀವ್ರವಾಗಿ ಖಂಡಿಸಿದೆ.
ರಾಜ್ಯ ಸರ್ಕಾರವು 2024 – 25ನೇ ಸಾಲಿನ ಬಜೆಟ್ ಮಂಡನೆ ಮಾಡುವಾಗ ಈಡಿಗ ನಿಗಮಕ್ಕೆ ನಯಾ ಪೈಸೆ ಘೋಷಣೆ ಮಾಡದೆ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ವಾಗ್ದಾನವನ್ನು ಮರೆತ ವಚನಭ್ರಷ್ಟ ಸರಕಾರ ಎಂಬುದಾಗಿ ಸಾಬೀತುಪಡಿಸಿದೆ ಎಂದು ಹೋರಾಟ ಸಮಿತಿಯ ಅಧ್ಯಕ್ಷರಾದ ಸತೀಶ್ ವಿ. ಗುತ್ತೇದಾರ್ ಮತ್ತು ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಎಂ.
ಕಡೇಚೂರ್ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿ ವರ್ಷ ಈಡಿಗ- ಬಿಲ್ಲವರಿಗೆ 250 ಕೋಟಿ ಹಾಗೂ ಬಂಟರ ನಿಗಮಕ್ಕೆ 250 ಕೋಟಿ ರೂ.ಅನುದಾನ ನೀಡುವುದಾಗಿ ಮಂಗಳೂರಿನಲ್ಲಿ ವಾಗ್ದಾನ ಮಾಡಿ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸಿ ಇದೀಗ 15ನೇ ಬಾರಿಗೆ ಬಜೆಟ್ ಮಂಡನೆ ಮಾಡಿದ ಹೆಗ್ಗಳಿಕೆಯನ್ನು ಇಟ್ಟುಕೊಂಡ ಹಿಂದುಳಿದ ವರ್ಗದ ನಾಯಕರೆಂದು ಬಿಂಬಿಸಿದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳ 70 ಲಕ್ಷ ಸಂಖ್ಯೆಯ ಜನರಿಗೆ ಪಂಗನಾಮ ಹಾಕಿದೆ. ತಮ್ಮ ಸರಕಾರ ಆಡಳಿತಕ್ಕೆ ಬಂದು ಎರಡನೇ ಬಜೆಟ್ ಮಂಡಿಸಿದರೂ ಯಾವುದೇ ಅನುದಾನವನ್ನು ನೀಡದೆ ಸಮಸ್ತ ಬಿಲ್ಲವ,ಈಡಿಗ ನಾಮಧಾರಿ,
ಧೀವರ ಸಮಾಜವನ್ನು ಕಡೆಗಣಿಸಿ ವಂಚಿಸಿದೆ.
ಈ ರೀತಿಯ ಧೋರಣೆಯು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ ಈ ಸಮಾಜದ ಅಭಿವೃದ್ಧಿ ಹಾಗೂ ಶ್ರೀ ನಾರಾಯಣ ಗುರುಗಳ ತತ್ವ ವಿಚಾರಗಳ ಅನುಷ್ಠಾನ ಗೊಳಿಸಲು ಬುನಾದಿಯೇ ಹಾಕಲಾಗದಂತಾಗಿದೆ. ಬ್ರಹ್ಮಶ್ರೀ ನಾರಾಯಣ ಗುರು ವಸತಿ ನಿಲಯಗಳ ನ್ನು ಪ್ರತಿ ಜಿಲ್ಲೆಗಳಲ್ಲಿ ಪ್ರಾರಂಭಿಸಬೇಕು ಮತ್ತು ಶೇಕಡ 50ರಷ್ಟು ಸೀಟುಗಳನ್ನು ಸಮುದಾಯದವರಿಗೆ ಮೀಸಲಿಡಬೇಕು ಹಾಗೂ ಕಲ್ಬುರ್ಗಿ ವಿಶ್ವವಿದ್ಯಾಲಯದಲ್ಲಿ ನಾರಾಯಣ ಗುರುಗಳ ಅಧ್ಯಯನಪೀಠ ಪ್ರಾರಂಭಿಸಬೇಕು ಎಂದು ಒತ್ತಾಯಿಸಲಾಗಿತ್ತು. ಬಿಲ್ಲವ,ಈಡಿಗ ಹಿಂದುಳಿದ ಸಮಾಜದ ಅಭಿವೃದ್ಧಿಗೆ ಅನುದಾನದ ಭರವಸೆ, ಅಧ್ಯಯನ ಪೀಠ ವಸತಿ ನಿಲಯಗಳನ್ನು ನೀಡದ ಈ ಸರಕಾರ ಕೇವಲ ಚುನಾವಣಾ ಪ್ರಚಾರಕ್ಕೆ ಮಾತ್ರ ಸೀಮಿತವಾಗಿ ಸಾಮಾಜಿಕ ನ್ಯಾಯವನ್ನು ಮರೆತಿದೆ. ಬಜೆಟ್ ನಲ್ಲಿ ‘ಒಂದೇ ಜಾತಿ ಒಂದೇ ಮತ, ಒಬ್ಬನೇ ದೇವರು’ ಎಂದು ಸಾರಿದ ಬ್ರಹ್ಮಶ್ರೀ ಶ್ರೀ ನಾರಾಯಣ ಗುರುಗಳನ್ನು ಹಾಗೂ ಅವತಾರ ಪುರುಷರಾದ ಕೋಟಿ ಚೆನ್ನಯರ ಸ್ವಾಭಿಮಾನದ ಬದುಕನ್ನು ಮತ್ತು ಈಡಿಗ ಜನಾಂಗವನ್ನು ಬಜೆಟ್ ನಲ್ಲಿ ಉಲ್ಲೇಖಿಸಲು ಕೂಡ ಮರೆತ ಮುಖ್ಯಮಂತ್ರಿಗಳ ನಡೆಯು ಈಡಿಗ – ಬಿಲ್ಲವ ಜನಾಂಗ ವಿರೋಧಿಯಾಗಿದೆ ಎಂಬುದನ್ನು ಸಾಬೀತು ಮಾಡಿದೆ. ಇತ್ತೀಚೆಗೆ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಮ್ಮ ಸಮುದಾಯದ ಸಚಿವರಾದ ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ ನಡೆದ ಈಡಿಗ ಸಮುದಾಯದ ಸಮಾವೇಶದಲ್ಲಿ ಭಾಗವಹಿಸಿ ಮುಂದಿನ ದಿನಗಳಲ್ಲಿ ಸಮುದಾಯಕ್ಕೆ ಉತ್ತಮ ಭವಿಷ್ಯ ನೀಡಲು ಸರಕಾರ ಚಿಂತನೆ ಮಾಡುತ್ತಿದೆ ಮತ್ತು ಅಧಿವೇಶನ ಸಂದರ್ಭದಲ್ಲಿ ಯಾವುದೇ ಘೋಷಣೆ
ಮಾಡಲು ಅಸಾಧ್ಯ ಎಂದು ಮುಖ್ಯ ಮಂತ್ರಿಗಳು ಹೇಳಿ ಮಂಕುಬೂದಿ ಎರಚಿದ್ದರು.
ನಮ್ಮ ಸಮುದಾಯವನ್ನು ಪ್ರತಿನಿಧಿಸುವ ಮಧು ಬಂಗಾರಪ್ಪ ಕ್ಯಾಬಿನೆಟ್ ಸಚಿವರಾಗಿದ್ದ ರೂ ಬಜೆಟ್ ನಲ್ಲಿ ಚಿಕ್ಕಾಸು ಬಿಡುಗಡೆ ಮಾಡಲು ವಿಫಲರಾದುದು ಈಡಿಗ
ಜನಾಂಗಕ್ಕೆ ದುರದೃಷ್ಟಕರ ಸಂಗತಿಯಾಗಿದೆ. ಈಡಿಗ ಸಮುದಾಯದ ಸ್ವಾಮೀಜಿ ಹಾಗೂ ಚಿತ್ತಾಪುರ ತಾಲೂಕು ಕರದಾಳು ಬ್ರಹ್ಮ ಶ್ರೀ ನಾರಾಯಣ ಗುರು ಶಕ್ತಿ ಪೀಠದ ಪೂಜ್ಯರಾದ ಡಾ. ಪ್ರಣವಾನಂದ ಶ್ರೀಗಳ ನೇತೃತ್ವದಲ್ಲಿ ಮಂಗಳೂರಿನಿಂದ ಬೆಂಗಳೂರು ವರೆಗೆ ಪಾದಯಾತ್ರೆ ಕೈಗೊಂಡು ಫ್ರೀಡಂ ಪಾರ್ಕ್ ನಲ್ಲಿ ಅಮರಣಾಂತ ಉಪವಾಸ ಮುಷ್ಕರ ಹೂಡಿ ಈಡಿಗ ನಿಗಮವನ್ನು ಘೋಷಣೆ ಮಾಡುವಂತೆ ಸರಕಾರಕ್ಕೆ ಒತ್ತಡ ಹಾಕಿ ಜಯ ಸಾಧಿಸಲಾಗಿತ್ತು. ಆದರೆ ಆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರೆಲ್ಲ ಬಂದು ತಮ್ಮ ಸರಕಾರ ಅಸ್ತಿತ್ವಕ್ಕೆ ಬಂದರೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಇದೀಗ ಅನುದಾನ ಘೋಷಿಸದೆ ಕಾಂಗ್ರೆಸ್ಸಿನ ನಿಜ ಬಣ್ಣ ಬಯಲಾಗಿದೆ.
ಸರಕಾರವು ಬಿಲ್ಲವ – ಈಡಿಗ ಸಮುದಾಯದ ಸಮಾಜಕ್ಕೆ ಕೇವಲ ಚುನಾವಣಾ ಸಮಯದಲ್ಲಿ ಸುಳ್ಳು ಭರವಸೆಗಳನ್ನು ನೀಡಿ ಪ್ರತಿ ಬಜೆಟ್ ನಲ್ಲೂ ಶ್ರೀನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಯಾವುದೇ ಅನುದಾನವನ್ನು ನೀಡದೆ ಪಂಗನಾಮ ಹಾಕುವುದು ಸಾಮಾನ್ಯವಾಗಿದೆ. ಹಿಂದುಳಿದ ವರ್ಗವಾದ ಬಿಲ್ಲವ-ಈಡಿಗರ ಅಭಿವೃದ್ಧಿ ಗಾಗಿ 500ಕೋಟಿ ಅನುದಾನದ ಕನಸು ಕನಸಾಗಿಯೇ ಉಳಿದಿದೆ. ಸ್ವಾತಂತ್ರ್ಯ ಬಂದು 75 ವರ್ಷ ಸಂದರೂ ಬಿಲ್ಲವ, ನಾಮಧಾರಿ ಈಡಿಗ, ಧೀವರ ಸೇರಿದಂತೆ 70 ಲಕ್ಷದಷ್ಟಿರುವ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ನೀಡದೆ ಮಹಾ ಮೋಸ ಮಾಡಿದ ಸರಕಾರ ಮತ್ತು ಪಕ್ಷಗಳಿಗೆ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲು ಸಮುದಾಯದ ಜನರು ಪ್ರತಿಜ್ಞೆ ಕೈಗೊಳ್ಳಬೇಕಾಗಿದೆ. ಈ ಬಗ್ಗೆ ಹೋರಾಟ ಸಮಿತಿಯು ಕರ್ನಾಟಕ ಪ್ರದೇಶ ಈಡಿಗ ಸಂಘ , ಅಖಿಲ ಭಾರತ ಬಿಲ್ಲವ ಅಸೋಸಿಯೇಷನ್, ಬಿಲ್ಲವ ಸಮಾಜ ಹಾಗೂ ನಾಮಧಾರಿ, ಧೀವರ,ನಾಯಕ ಸೇರಿದಂತೆ ಉಪ ಪಂಗಡಗಳ ಜೊತೆ ಚರ್ಚಿಸಲು ನಿರ್ಧರಿಸಲಾಗಿದೆ. ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಪ್ರಮುಖರು ಸೇರಿಕೊಂಡು ಡಾ. ಪ್ರಣವಾನಂದ ಶ್ರೀಗಳ ಸಮ್ಮುಖದಲ್ಲಿ ಶೀಘ್ರ ದಲ್ಲಿ ಸಭೆ ಸೇರಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.