ಬ್ರಹ್ಮಶ್ರೀ ನಾರಾಯಣಗುರು ವೃತ್ತಕ್ಕೆ ಶಿಲಾನ್ಯಾಸ

ಮಂಗಳೂರು, ಜು.೨೫- ನಗರದ ಲೇಡಿ ಹಿಲ್ ಶಾಲೆಯ ಹತ್ತಿರ ಇರುವ ಬ್ರಹ್ಮಶ್ರೀ ನಾರಾಯಣ ಗುರು ವೃತ್ತಕ್ಕೆ ರವಿವಾರ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನೀಲ್ ಕುಮಾರ್ ಶಿಲಾನ್ಯಾಸ ನೆರವೇರಿಸಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸುನಿಲ್‌ ಕುಮಾರ್‌, ಮಂಗಳೂರಿನ ಪ್ರಮುಖ ರಸ್ತೆಗೆ ಈ ಹಿಂದೆಯೇ ಬ್ರಹ್ಮಶ್ರೀ ನಾರಾಯಣ ಗುರು ಅವರ ಹೆಸರನ್ನು ನಾಮಕರಣ ಮಾಡಲಾಗಿತ್ತು. ಈಗ ಪ್ರಾಧಿಕಾರದ ಸಹಭಾಗಿತ್ವದೊಂದಿಗೆ ಸುಮಾರು 48 ಲಕ್ಷ ರೂ. ವೆಚ್ಚದಲ್ಲಿ ಸುಂದರವಾದ ನಾರಾಯಣ ಗುರು ವೃತ್ತವನ್ನು ನಿರ್ಮಿಸಲು ಅಧಿಕೃತವಾಗಿ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶವನ್ನು ಬೇರೆ ಬೇರೆ ಆಯಾಮಗಳಲ್ಲಿ ಪ್ರಕಟಿಸುವಂತಹ ಕಾರ್ಯವನ್ನು ಜಾರಿಗೊಳಿಸಲಾಗುತ್ತಿದೆ, ಇಲ್ಲಿ ವೃತ್ತ ಹಾಗೂ ಅವರ ಸುಂದರ ಪುತ್ಥಳಿ ನಿರ್ಮಿಸಲಾಗುವುದು, ಮುಂದಿನ ನವರಾತ್ರಿಗೆ ನಿರ್ಮಾಣ ಕಾಮಗಾರಿ ಪೂರ್ಣವಾಗಲಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅಮೃತ ಭಾರತಿಗೆ ಕನ್ನಡದಾರತಿ ಎನ್ನುವ ವಿಶೇಷ ಅಭಿಯಾನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಡೆಯುತ್ತಿದೆ, ಅದಕ್ಕೆ ಪೂರಕವಾಗಿ ಸ್ವಾತಂತ್ರ್ಯದ ಹೋರಾಟಕ್ಕೆ ಕರ್ನಾಟಕದ ಕೊಡುಗೆಯನ್ನು ಜನಮಾನಸಕ್ಕೆ ತಿಳಿಸಿಕೊಡಲಾಗುತ್ತಿದೆ. ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ರಂಗಾಯಣದ ಮೂಲಕ ಕರ್ನಾಟಕದ ಹೋರಾಟಗಳನ್ನು ತಿಳಿಸುವ ನಾಟಕ, ಚಲನಚಿತ್ರ ಪ್ರದರ್ಶನಗಳು, ಕರ ಪತ್ರಗಳ ಹಂಚಿಕೆ, ರಥಯಾತ್ರೆ ನಡೆಯುತ್ತಿದೆ. ಆಗಸ್ಟ್ 12 ರಿಂದ ಎಲ್ಲಾ ಮನೆಗಳ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸಬೇಕು, ಕರ್ನಾಟಕದಲ್ಲಿ ಒಂದು ಕೋಟಿ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಬೇಕು, ಈ ಸಂದರ್ಭದಲ್ಲಿ ರಾಷ್ಟ್ರಧ್ವಜದ ದೊಡ್ಡ ದೊಡ್ಡ ಮೆರವಣಿಗೆಗಳನ್ನು ನಡೆಸುವಂತೆ ಅವರು ಯುವಜನತೆಗೆ ಕರೆ ನೀಡಿದರು. ಶಾಸಕರಾದ ವೇದವ್ಯಾಸ ಕಾಮತ್, ಡಾ ಭರತ್ ಶೆಟ್ಟಿ, ಮೇಯರ್ ಪ್ರೇಮಾನಂದ ಶೆಟ್ಟಿ, ವಿವಿಧ ಜನಪ್ರತಿನಿಧಿಗಳು, ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.