ಬ್ರಹ್ಮರಥೋತ್ಸವಕ್ಕೆ ತಹಶೀಲ್ದಾರ್ ಚಾಲನೆ

ಮಾಲೂರು.ಮಾ೮:ಹೋಳಿ ಹುಣ್ಣಿಮೆ ಹಬ್ಬದ ಅಂಗವಾಗಿ ಪಟ್ಟಣದ ಶ್ರೀ ಶಂಕರ ನಾರಾಯಣಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವಕ್ಕೆ ತಹಸೀಲ್ದಾರ್ ಕೆ.ರಮೇಶ್ ಅವರು ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಪಟ್ಟಣದ ದೊಡ್ಡಪೇಟೆ ಮುಖ್ಯ ರಸ್ತೆಯಲ್ಲಿರುವ ಮುಜರಾಯಿ ಇಲಾಖೆಗೆ ಸೇರಿದ ಪುರಾತನ ಶ್ರೀ ಶಂಕರ ನಾರಾಯಣಸ್ವಾಮಿ ದೇಗುಲದಲ್ಲಿ ಬ್ರಹ್ಮರಥೋತ್ಸವದ ಅಂಗವಾಗಿ ದೇವಾಲಯದ ಅರ್ಚಕ ಶ್ರೀನಾಥ್ ದೀಕ್ಷಿತ್ ಅವರ ನೇತೃತ್ವದಲ್ಲಿ ಕಳೆದ ೯ ದಿನಗಳಿಂದ ವಿವಿಧ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀ ಶಂಕರ ನಾರಾಯಣಸ್ವಾಮಿ ದೇಗುಲದಲ್ಲಿ ಹೋಳಿ ಹುಣ್ಣೀಮೆ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಬ್ರಹ್ಮರಥೋತ್ಸವ ಅಂಗವಾಗಿ ಶಂಕರನಾರಾಯಣಸ್ವಾಮಿ ಮೂಲ ವಿಗ್ರಹಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಿದ ನಂತರ ಸಂಪ್ರದಾಯಬದ್ದವಾಗಿ ಮಂಗಳವಾದ್ಯಗಳೊಂದಿಗೆ ಪಾರ್ವತಿ ಸಮೇತ ಶಂಕರನಾರಾಯಣಸ್ವಾಮಿ ಉತ್ಸವ ಮೂರ್ತಿಗಳನ್ನು ದೇಗುಲವನ್ನು ಪ್ರದಕ್ಷಿಣೆ ಹಾಕಿದ ನಂತರ ಅಲಂಕೃತ ಉತ್ಸವ ಮೂರ್ತಿಗಳನ್ನು ರಥದಲ್ಲಿ ಕುಳ್ಳರಿಸಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ ನಂತರ ರಥೋತ್ಸವಕ್ಕೆ ತಹಸಿಲ್ದಾರ್ ಕೆ.ರಮೇಶ್ ವಿಶೇಷ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಭಕ್ತಾಧಿಗಳು ಬ್ರಹ್ಮರಥೋತ್ಸವವನ್ನು ಗೋವಿಂದ ನಾಮಸ್ಮರಣೆ ಮಾಡುತ್ತಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಎಳೆದು ತಮ್ಮ ಹರಿಕೆಯನ್ನು ಸಲ್ಲಿಸಿದರು. ಮಹಿಳೆಯರು ಶಂಕರನಾರಾಯಣಸ್ವಾಮಿಗೆ ಹೂವು ಹಣ್ಣು ಅರ್ಪಿಸಿ ಪೂಜೆ ಸಲ್ಲಿಸಿದರು. ಬ್ರಹ್ಮ ರಥೋತ್ಸವದ ಪ್ರಯುಕ್ತ ಪಟ್ಟಣದ ಶಂಕರನಾರಾಯಣಸ್ವಾಮಿ ದೇವಾಲಯ ಆವರಣ ಸೇರಿದಂತೆ ರಥೋತ್ಸವ ತೆರಳುವ ರಸ್ತೆ ಬದಿಗಳಲ್ಲಿ ಪಾನಕ, ನೀರುಮಜ್ಜಿಗೆ ಮತ್ತು ಕೋಸಂಬರಿಯನ್ನು ವಿತರಿಸಲಾಯಿತು.
ಮಾಜಿ ಶಾಸಕ ಕೆ.ಎಸ್.ಮಂಜುನಾಥಗೌಡ, ಬಿಜೆಪಿ ಮುಖಂಡ ಹೂಡಿ ವಿಜಯಕುಮಾರ್, ಆರ್,ವಿ.ಭೂತಪ್ಪ, ಜೆಡಿಎಸ್ ಮುಖಂಡ ಜಿ.ಇ.ರಾಮೇಗೌಡ, ಪುರಸಭಾ ಅಧ್ಯಕ್ಷ ಮಂಜುನಾಥ್, ಮಾಜಿ ಅಧ್ಯಕ್ಷೆ ನೀಲಚಂದ್ರ, ಮಾಜಿ ಉಪಾಧ್ಯಕ್ಷೆ ಗೀತಾ ರಮೇಶ್, ಮಾಜಿ ಸದಸ್ಯರಾದ ಎಂ.ಪಿ.ವಿಜಯಕುಮಾರ್, ಮುಜರಾಯಿ ಶಾಖೆ ಹರಿಪ್ರಸಾದ್, ದೇವಾಲಯದ ಮುಖಂಡರಾದ ಬೆಳ್ಳಾವಿ ಸೋಮಣ್ಣ, ತೇಜಸ್, ಕೋಟಾ ಲಕ್ಷ್ಮಣ್, ಕೋಟಾ ಹರೀಶ್, ಕೆಂಪಣ್ಣ, ಚೇತನ್, ಮುನಿಕೃಷ್ಣ, ವಿಠ್ಠಲ್ ರಾವ್, ನಂಜುಂಡಯ್ಯ, ನಾಗರಾಜು, ಇನ್ನಿತರರು ಇದ್ದರು.