
(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಆ.17: ತಾಲೂಕಿನ ಬಾಲೆ ಹೊಸೂರು ಗ್ರಾಮದಲ್ಲಿ ನ ಮೂರು ಕೆರೆಗಳನ್ನು ವರದಾ ನದಿ ಯಿಂದ ತುಂಬಿಸುವ ಯೋಜನೆ ಕಾರ್ಯಗತವಾಗದಿರುವುದನ್ನು ಪ್ರತಿಭಟಿಸಿ ಆಗಸ್ಟ್ 16 ರಿಂದ ಪ್ರತಿಭಟಿಸುವ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಮುಖಂಡರೊಂದಿಗೆ ಮಾತುಕತೆ ನಡೆಸಿ ಹಾವೇರಿ ಜಿಲ್ಲೆಯ ಮರಡೂರು ಗ್ರಾಮದಲ್ಲಿನ ವರದಾ ನದಿಗೆ ತೆರಳಿ ಜಾಕ್ವೆಲ್ಲ್ ಸಮೀಪವಿರುವ ಬ್ಯಾರೇಜ್ ಗೆ ಕ್ರಷ್ಟ ಗೇಟ್ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಇದಕ್ಕೂ ಮುಂಚೆ ಎರಡು ದಿನಗಳ ಹಿಂದೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ತಂಡ ಮುಖಂಡರೊಂದಿಗೆ ಮಾತುಕತೆ ನಡೆಸಿ ಕಾಲಾವಕಾಶ ಕೇಳಿದ್ದರಿಂದ ಅದರಂತೆ ಗ್ರಾಮದ ಯುವಕರು ಮುಖಂಡರು ಪ್ರತಿಭಟನೆಯನ್ನು ಕೈಬಿಟ್ಟಿದ್ದರು.
ಗ್ರಾಮಕ್ಕೆ ಬುಧವಾರ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಪ್ರವೀಣ್ ಕುಮಾರ್ ಗೌಡ ಪಾಟೀಲ್ ಆಗಮಿಸಿ ವರದಾ ನದಿಗೆ ತೆರಳಿ ಅಲ್ಲಿ ಜೆಸಿಬಿ ಮುಖಾಂತರ ಕ್ರಸ್ಟ್ ಗೇಟ್ ಅಳವಡಿಸುವ ಕಾರ್ಯವನ್ನು ಮುಖಂಡರೊಂದಿಗೆ ತೆರಳಿ ಪರಿಶೀಲಿಸಿದರು ಅಂದುಕೊಂಡಂತೆ ಎಲ್ಲವೂ ನಡೆದರೆ ಇಂದು ಸಂಜೆ ಅಥವಾ ಶುಕ್ರವಾರ ವರದಾ ನದಿಯಿಂದ ಕೆರೆಗಳಿಗೆ ನೀರು ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಬಸವ ರೆಡ್ಡಿ ಹನುಮರೆಡ್ಡಿ ಯಲ್ಲಪ್ಪ ಸೂರಣಗಿ ಸಿದ್ದಲಿಂಗಪ್ಪ ಪಶುಪತಿಮಠ ಈರಯ್ಯ ಮಾದಾಪುರ ಮಠ ಕರಿಯಪ್ಪ ಸಾಂದಲಿ ಶಿವು ಮುದಿಯಮ್ಮನವರ ಸೇರಿದಂತೆ ಅನೇಕರಿದ್ದರು.