ಬ್ಯಾರಿಕೇಡ್‌ನತ್ತ ನುಗ್ಗಲು ರೈತರ ಯತ್ನ, ಅಶ್ರುವಾಯು ಪ್ರಯೋಗ

ನವದೆಹಲಿ,ಫೆ.೨೧- ಎಂಎಸ್‌ಪಿ, ಸ್ವಾಮಿನಾಥನ್ ಆಯೋಗದ ವರದಿ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ರೈತ ಸಂಘಟನೆಗಳು ಮತ್ತೆ ದೆಹಲಿ ಚಲೋ ಆರಂಭಿಸಿವೆ. ಸಾವಿರಾರು ರೈತರು ಇಂದು ಪಂಜಾಬ್ ಮತ್ತು ಹರಿಯಾಣದ ಶಂಭು ಗಡಿಯಲ್ಲಿ ಬ್ಯಾರಿಕೇಡ್‌ಗಳತ್ತ ನುಗ್ಗಿದರು. ಇದರಿಂದ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ ಪ್ರತಿಭಟನಾನಿರತ ರೈತರನ್ನು ತಡೆಯಲು ಭದ್ರತಾ ಪಡೆ ಅಧಿಕಾರಿಗಳು ಅಶ್ರುವಾಯು ಸಿಡಿಸುತ್ತಿದ್ದಂತೆ ರೈತರು ದಿಕ್ಕಾಪಾಲಾಗಿ ಓಡಿದರು. ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು, ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ.
ಮೊನ್ನೆ ಕೇಂದ್ರ ಸರ್ಕಾರ ರೈತ ಮುಖಂಡರೊಂದಿಗೆ ನಡೆಸಿದ ಮಾತುಕತೆ ಮುರಿದು ಬಿದ್ದ ಹಿನ್ನೆಲೆಯಲ್ಲಿ ಬೇಡಿಕೆಗಳ ಈಡೇರಿಕೆಗಾಗಿ ರೈತರು ಮತ್ತೆ ದೆಹಲಿಚಲೋ ಪುನಾರಂಭಿಸಿದ್ದಾರೆ.ಇದೇ ವೇಳೆ ಜೆಸಿಬಿ-ಹಿಟಾಚಿ ಸೇರಿದಂತೆ ಇನ್ನಿತರ ಅಗೆಯುವ ಯಂತ್ರಗಳನ್ನು ಪ್ರತಿಭಟನಾ ಸ್ಥಳದಿಂದ ವಾಪಸ್ ಪಡೆಯುವಂತೆ ಹರಿಯಾಣ ಪೊಲೀಸರು ಟ್ರ್ಯಾಕ್ಟರ್ ಮಾಲೀಕರಿಗೆ ಸೂಚಿಸಿದ್ದಾರೆ.ಪಂಜಾಬ್ ಮತ್ತು ಹರಿಯಾಣ ಗಡಿಯಲ್ಲಿ ಸುಮಾರು ೧೪ ಸಾವಿರ ಜನರು, ೧,೨೦೦ ಟ್ರ್ಯಾಕ್ಟರ್-ಟ್ರಾಲಿಗಳು, ೩೦೦ ಕಾರುಗಳು, ೧೦ ಮಿನಿ ಬಸ್‌ಗಳು ಮತ್ತು ಸಣ್ಣ ಸಣ್ಣ ವಾಹನಗಳು, ಪೊಕ್ಲೆನ್ ಮತ್ತು ಜೆಸಿಬಿ ಯಂತ್ರಗಳನ್ನು ಜಮಾವಣೆ ಮಾಡಲಾಗಿದೆ ಎಂದು ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಲು ಪಂಜಾಬ್ ಮತ್ತು ಹರಿಯಾಣಕ್ಕೆ ಕೇಂದ್ರ ಸರ್ಕಾರ ಕಟ್ಟಿನಿಟ್ಟಿನ ಸೂಚನೆ ನೀಡಿದೆ.
ಶಂಭುಗಡಿಯಲ್ಲಿ ೧ ಲಕ್ಷಕ್ಕೂ ಅಧಿಕ ರೈತರು ಪಂಜಾಬ್-ಹರಿಯಾಣ ಗಡಿಯಲ್ಲಿ ಕಳೆದ ಒಂದು ವಾರದಿಂದ ವಾಸ್ತವ್ಯ ಹೂಡಿದ್ದಾರೆ. ಕೇಂದ್ರ ಸರ್ಕಾರ ೨೦೨೦-೨೨ರಲ್ಲಿ ನಡೆದ ರೈತರು ನಡೆಸಿದ ಪ್ರತಿಭಟನೆ ಹಿಂಸಾ ರೂಪಕ್ಕೆ ತಿರುಗಿತ್ತು. ಅಂತಹ ಘಟನೆಗಳು ಮರುಕಳಿಸದಂತೆ ಕೇಂದ್ರ ಸರ್ಕಾರ ಕಟ್ಟೆಚ್ಚರ ವಹಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ.
ಕಾಂಕ್ರಿಟ್ ಬ್ಯಾರಿಕೇಡ್, ತಂತಿಬೇಲಿಗಳು, ಮುಳ್ಳು ತಂತಿಗಳನ್ನು ಅಳವಡಿಸಲಾಗಿದ್ದು, ರೈತರು ಟ್ರ್ಯಾಕ್ಟರ್‌ಗಳಲ್ಲಿ ತಂಡೋಪತಂಡವಾಗಿ ಬರುವುದನ್ನು ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ. ರಾಜಧಾನಿ ದೆಹಲಿ ಸುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಘಾಜಿಪುರ್, ಟಿಕ್ರಿ, ನೊಯ್ಡಾ ಮತ್ತು ಸಿಂಗು ಗಡಿಯಲ್ಲಿ ಬ್ಯಾರಿಕೇಡ್ ಮತ್ತು ಸಿಮೆಂಟ್ ಬ್ಯಾರಿಕೇಡ್‌ನ್ನು ಹಾಕಲಾಗಿದೆ. ರೈತರು ಶಾಂತಿಯುತವಾಗಿ ದೆಹಲಿ ಚಲೋ ನಡೆಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರ ರೈತರ ಮೇಲೆ ಬಲ ಪ್ರಯೋಗ ಮಾಡಬಾರದು. ಆರು ತಿಂಗಳಿಗಾಗುವಷ್ಟು ಆಹಾರವನ್ನು ಟ್ರ್ಯಾಕ್ಟರ್‌ಗಳಲ್ಲಿ ತುಂಬಿಸಿಕೊಂಡು ಬಂದಿದ್ದೇವೆ ಎಂದು ರೈತರೊಬ್ಬರು ತಿಳಿಸಿದ್ದಾರೆ.
ರೈತರ ಹೆಸರಲ್ಲಿ ದಾಂಧಲೆ ಸಾಧ್ಯತೆ:
ಶಂಭು ಗಡಿಯಲ್ಲಿ ರೈತರ ಸೋಗಿನಲ್ಲಿ ಇತರ ಜನರು ಜಮಾವಣೆ ಆಗಿದ್ದಾರೆ. ಯಾವುದೇ ಕ್ಷಣದಲ್ಲಿ ಅಹಿತಕರ ಘಟನೆಗಳು ನಡೆಯುವ ಸಾಧ್ಯತೆಯಿದೆ. ಭಾರಿ ಯಂತ್ರೋಪಕರಣಗಳ ಜೊತೆಗೆ ಭದ್ರತಾ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಲಾಗುತ್ತಿದೆ. ಕಾನೂನು ಸುವ್ಯವಸ್ಥೆ ಹಾಳಾಗುವ ಮೊದಲು ಜನರು ಒಂದೆಡೆ ಸೇರುವುದನ್ನು ತಡೆಯಿರಿ ಎಂದು ಕೇಂದ್ರ ಸರ್ಕಾರ ತಾಕೀತು ಮಾಡಿದೆ.

ಮಾತುಕತೆಗೆ ಅಹ್ವಾನ
ಬೇಡಿಕೆಗಳ ಈಡೇರಿಕೆಗಾಗಿ ದೆಹಲಿ ಚಲೋ ಪ್ರತಿಭಟನೆ ಪುನರಾರಂಭಿಸಿರುವ ರೈತ ಮುಖಂಡರ ಜತೆಗೆ ೫ನೇ ಸುತ್ತಿನ ಮಾತುಕತೆ ನಡೆಸಲು ಸಿದ್ಧ ಎಂದು ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ತಿಳಿಸಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ೫ನೇ ಸುತ್ತಿನ ಮಾತುಕತೆ ನಡೆಸಲು ರೈತ ಮುಖಂಡರನ್ನು ಆಹ್ವಾನಿಸುತ್ತೇವೆ. ಕನಿಷ್ಠ ಬೆಂಬಲ ಬೆಲೆ, ಕೃಷಿ ತ್ಯಾಜ್ಯ, ಎಫ್‌ಐಆರ್ ಮತ್ತು ಬೆಳೆ ವೈವಿಧ್ಯೀಕರಣದಂತಹ ವಿಷಯಗಳ ಬಗ್ಗೆ ಚರ್ಚಿಸಲು ಸಿದ್ಧರಿದ್ದೇವೆ. ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳಲು ಬದ್ಧವಾಗಿದ್ದು, ರೈತರು ಶಾಂತಿ ಕಾಪಾಡಬೇಕೆಂದು ಅವರು ಮನವಿ ಮಾಡಿದ್ದಾರೆ.

ಧರಣಿ ಸ್ಥಳದಿಂದ ದೂರವಿರಿ:
ರೈತರು ನಡೆಸುತ್ತಿರುವ ಧರಣಿಯಿಂದ ದೂರ ಇರುವಂತೆ ಜನರು ಮತ್ತು ಮಾಧ್ಯಮಗಳಿಗೆ ಎಚ್ಚರಿಕೆ ನೀಡಲಾಗಿದೆ.ಹರಿಯಾಣ ಪೊಲೀಸ್ ಮಹಾನಿರ್ದೇಶಕ ಶತ್ರುಜಿತ್ ಕಪೂರ್ ಹೇಳಿದ್ದಾರೆ.ರೈತರ ಹೋರಾಟದ ಸ್ಥಳದಿಂದ ೧ ಕಿ.ಮೀ ದೂರದ ಅಂತರ ಕಾಯ್ದುಕೊಳ್ಳಿ. ಮಾಧ್ಯಮಗಳು ೧ ಕಿ.ಮೀ ದೂರದಲ್ಲೇ ತಮ್ಮ ವಾಹನಗಳನ್ನು ನಿಲ್ಲಿಸಿ ಅಲ್ಲಿಂದಲೇ ವರದಿ ಮಾಡಿ. ಹತ್ತಿರ ಹೋದರೆ ಅಪಾಯದ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ