ಬ್ಯಾನರ್, ಫ್ಲೆಕ್ಸ್ ತೆರವು

ಲಕ್ಷ್ಮೇಶ್ವರ,ಮಾ.30: ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುವ ದಿನಾಂಕ ಪ್ರಕಟವಾದ ಹಿನ್ನೆಲೆಯಲ್ಲಿ ಬುಧವಾರ ನೀತಿ ಸಂಹಿತೆ ಜಾರಿ ಆಗಿದ್ದು ಪಟ್ಟಣದ ಸಾರ್ವಜನಿಕ ಸ್ಥಳಗಳಲ್ಲಿ ಹಾಕಲಾಗಿದ್ದ ಬ್ಯಾನರ್, ಪ್ಲೆಕ್ಸ್, ಧ್ವಜಗಳನ್ನು ಪುರಸಭೆ ಸಿಬ್ಬಂದಿ ತೆರವುಗೊಳಿಸಿದರು. ಈವರೆಗೆ ಪಟ್ಟಣದಲ್ಲಿ ಅಳವಡಿಸಲಾಗಿದ್ದ ಎಲ್ಲ ಪ್ಲೆಕ್ಸ್‍ಗಳನ್ನು ತೆರವುಗೊಳಿಸಲಾಯಿತು. ಅಲ್ಲದೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ ರಾಜಕೀಯ ಚಟುವಟಿಕೆಗಳಿಗೆ ನಿರ್ಬಂಧ ಹಾಕಲಾಯಿತು.
ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ನೇತೃತ್ವದಲ್ಲಿ ಪುರಸಭೆ ಸಿಬ್ಬಂದಿ ಮಂಜುನಾಥ ಮುದಗಲ್ಲ, ಬಸವಣ್ಣೆಪ್ಪ ನಂದೆಣ್ಣವರ ಮತ್ತು ಪೌರ ಕಾರ್ಮಿಕರು ಪಟ್ಟಣದ ಎಲ್ಲ ವಾರ್ಡ್‍ಘಳಲ್ಲಿ ಕಟ್ಟಿದ್ದ ಧ್ವಜಗಳನ್ನು ಹಾಗೂ ಸರ್ಕಾರದ ಜಾಹೀರಾತು ಬ್ಯಾನರ್‍ಗಳನ್ನೂ ಸಹ ತೆಗೆದರು. ಮಹಾಕವಿ ಪಂಪ ವರ್ತುಲ, ಹೊಸ ಬಸ್ ನಿಲ್ದಾಣ, ಗದಗ ವರ್ತುಲ, ಶಿಗ್ಲಿ ನಾಕಾ, ಪುರಸಭೆ, ತಹಶೀಲ್ದಾರರ ಕಚೇರಿ ಸೇರಿದಂತೆ ಮತ್ತಿತರ ಸ್ಥಳಗಳಲ್ಲಿದ್ದ ಎಲ್ಲ ರೀತಿಯ ಸರ್ಕಾರಿ ಬ್ಯಾನರ್‍ಗಳನ್ನು ತೆರವುಗೊಳಿಸಲಾಯಿತು. ಮತ್ತು ದೊಡ್ಡ ದೊಡ್ಡ ಬೋರ್ಡ್‍ಗಳನ್ನು ಬಟ್ಟೆಯಿಂದ ಮುಚ್ಚಲಾಯಿತು.