ಬ್ಯಾಡ್ಮಿಂಟನ್ ಏಶ್ಯಾ ಚಾಂಪಿಯನ್‌ಶಿಪ್: ಇತಿಹಾಸ ಸೃಷ್ಟಿಸಿದ ವನಿತೆಯರು

ಸೆಲಂಗೊರ್ (ಮಲೇಶ್ಯಾ), ಫೆ.೧೮- ಇಲ್ಲಿ ನಡೆಯುತ್ತಿರುವ ಬ್ಯಾಡ್ಮಿಂಟನ್ ಏಶ್ಯಾ ಟೀಮ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ವನಿತೆಯರು ಇತಿಹಾಸ ಬರೆದಿದ್ದಾರೆ. ಫೈನಲ್‌ನಲ್ಲಿ ಪ್ರಬಲ ಎದುರಾಳಿ ಥೈಲ್ಯಾಂಡ್ ವಿರುದ್ಧ ೩-೨ರ ರೋಚಕ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಭಾರತೀಯ ಮಹಿಳೆಯರು ಟೂರ್ನಿಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಇದಕ್ಕೂ ಮುನ್ನ ಜಪಾನ್ ವಿರುದ್ಧದ ಸೆಮಿಫೈನಲ್ ಪಂದ್ಯವನ್ನು ಭಾರತೀಯ ಮಹಿಳಾ ತಂಡ ೩-೨ರ ಅಂತರದಲ್ಲಿ ಗೆದ್ದುಕೊಂಡು ಫೈನಲ್‌ಗೆ ಎಂಟ್ರಿ ಕೊಟ್ಟಿತ್ತು. ಆದರೆ ಭಾರತದ ಪ್ರಶಸ್ತಿ ಗೆದ್ದುಕೊಳ್ಳುವ ಕನಸು ಅಷ್ಟು ಸುಲಭವಾಗಿರಲಿಲ್ಲ. ಘಟಾನುಘಟಿ ಆಟಗಾರರನ್ನು ಹೊಂದಿದ್ದ ಥೈಲ್ಯಾಂಡ್ ವಿರುದ್ಧ ಗೆಲುವು ಸಾಧಿಸುವುದು ಭಾರತಕ್ಕೆ ಬಹುತೇಕ ಕಠಿಣವೇ ಆಗಿತ್ತು. ಆದರೆ ಎಲ್ಲಾ ಅಡೆತಡೆಗಳನ್ನು ಮೀರಿದ ಭಾರತದ ಮಹಿಳೆಯರು ಚಿನ್ನಕ್ಕೆ ಕೊರಳೊಡ್ಡಿದ್ದಾರೆ. ಇನ್ನು ಫೈನಲ್‌ನ ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಪಿವಿ ಸಿಂಧು ಎದುರಾಳಿ ಸುಪನಿದಾ ಕಟೆತೊಂಗ್ ವಿರುದ್ಧ ೨೧-೧೨, ೨೧-೧೨ರ ಸುಲಭ ಅಂತರದಲ್ಲಿ ಗೆಲುವು ಸಾಧಿಸಿ ಮೊದಲ ಮುನ್ನಡೆ ನೀಡಿದ್ದರು. ಅಲ್ಲದೆ ಮೊದಲ ಡಬಲ್ಸ್‌ನಲ್ಲಿ ತ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್ ಪುಲ್ಲೇಲ ಜೋಡಿಯು ಎದುರಾಳಿ ಜೋಂಗ್‌ಕೋಲ್ಫಾನ್ ಕಿಟಿತಾರಾಕುಲ್-ರವಿಂದ ಪ್ರ ಜೊಂಗ್‌ಜೈ ವಿರುದ್ಧ ೨೧-೧೬, ೧೮-೨೧ ಹಾಗೂ ೨೧-೧೬ರ ಅಂತರದಲ್ಲಿ ಗೆದ್ದುಕೊಂಡು ಭಾರತಕ್ಕೆ ೨-೦ ಅಂತರದ ಮುನ್ನಡೆ ಒದಗಿಸಿತ್ತು. ಆದರೆ ಎರಡನೇ ಸಿಂಗಲ್ಸ್ ಪಂದ್ಯದಲ್ಲಿ ಅಶ್ಮಿತಾ ಚಲಿಹಾ ಅವರು ೧೧-೨೧, ೧೪-೨೧ ರ ಅಂತರದಲ್ಲಿ ಬುಸಾನನ್ ಒಂಗ್ಬಮ್ರುಂಗ್ಫಾನ್ ವಿರುದ್ಧ ಸೋಲುಂಡರು. ಅಲ್ಲದೆ ಎರಡನೇ ಡಬಲ್ಸ್‌ನಲ್ಲಿ ಕೂಡ ಭಾರತಕ್ಕೆ ನಿರಾಶೆ ಕಾದಿತ್ತು. ಪ್ರಿಯಾ ಕೊಂಗೆಂಗ್ಬೌಮ್-ಶ್ರುತಿ ಮಿಶ್ರಾ ಜೋಡಿಯು ೧೧-೨೧, ೯-೨೧ ರ ಅಂತರದಲ್ಲಿ ಬೆನ್ಯಾಪ್ ಎಮ್ಸಾರ್ಡ್/ನುತ್ಕರನ್ ಎಮ್ಸಾರ್ಡ್ ವಿರುದ್ಧ ಸೋಲುಂಡರು. ಪರಿಣಾಮ ಭಾರತ ಹಾಗೂ ಥೈಲ್ಯಾಂಡ್ ೨-೨ರ ಅಂತರದಲ್ಲಿ ಸಮಬಲ ಸಾಧಿಸಿತ್ತು. ಮೂರನೇ ಪಂದ್ಯ ರೋಚಕತೆ ಮೂಡಿಸಿತ್ತು. ಆದರೆ ಎಲ್ಲಾ ಒತ್ತಡಗಳನ್ನು ಮೆಟ್ಟಿ ನಿಂತ ಭಾರತದ ಅನ್ಮೋಲ್ ಖರ್ಬ್ ಅವರು ಮೂರನೇ ಸಿಂಗಲ್ಸ್ ಪಂದ್ಯದಲ್ಲಿ ೨೧-೧೪, ೨೧-೯ರ ಅಂತರದಲ್ಲಿ ಪೋರ್ನ್‌ಪಿಚಾ ಚೋಯ್ಕೆವೊಂಗ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಭಾರತಕ್ಕೆ ಸ್ವರ್ಣ ಪದಕ ಗೆದ್ದುಕೊಳ್ಳುವಂತೆ ಮಾಡಿದರು. ಈ ಮೂಲಕ ಭಾರತ ಟೂರ್ನಿಯ ಇತಿಹಾಸದಲ್ಲಿ ಮೊದಲ ಬಾರಿಗೆ ಚಿನ್ನ ಪಡೆದ ಸಾಧನೆ ತೋರಿತು. ಇದಕ್ಕೂ ಮುನ್ನ ೨೦೧೬ ಹಾಗೂ ೨೦೨೦ರಲ್ಲಿ ಭಾರತೀಯ ಪುರುಷರು ಕಂಚಿನ ಗೆದ್ದುಕೊಂಡಿದ್ದರು.