
ಸದಭಿರುಚಿತ್ರ ನಿರ್ದೇಶಕ ಪಿ.ಸಿ.ಶೇಖರ್ ನಿರ್ದೇಶನದ “ಬ್ಯಾಡ್” ಚಿತ್ರದ ಬಗ್ಗೆ ಹೊಸ ಮಾಹಿತಿ ಬಹಿರಂಗಗೊಂಡಿದೆ. ಇತ್ತೀಚೆಗೆ ತೆರೆಕಂಡ “ನಾನು, ಅದು ಮತ್ತು ಸರೋಜ” ಚಿತ್ರದಲ್ಲಿ ಅಭಿನಯಿಸಿರುವ ನಟಿ ಅಪೂರ್ವ ಭಾರದ್ವಾಜ್ ಪ್ರೀತಿಯ ಪ್ರತಿನಿಧಿಯಾಗಿ ಕಾಣಿಸಿಕೊಂಡಿದ್ದಾರೆ.
ಚಿತ್ರದಲ್ಲಿ ಕಾಮ, ಕ್ರೋಧ ಮೊದಲಾದ ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಆರು ಪಾತ್ರಗಳಿದೆ ಎಂದು ಮೊದಲೆ ತಿಳಿಸಲಾಗಿತ್ತು. ಆ ಪೈಕಿ ಕಾಮ ಎಂಬ ವರ್ಗವನ್ನು ಅನು ಎಂಬ ಪಾತ್ರದ ಮೂಲಕ ತೋರಿಸಲಾಗುತ್ತಿದೆ. ಈ ಪಾತ್ರದಲ್ಲಿ ಅಪೂರ್ವ ಭಾರದ್ವಾಜ್ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರದಲ್ಲಿ ಕಾಮವನ್ನು ಪ್ರೀತಿಗೆ ಬದಲಾಯಿಸಿ ತೋರಿಸಲಾಗುತ್ತಿದೆ. ಚಿಕ್ಕವಯಸ್ಸಿನಲ್ಲೇ ತಾಯಿ ಕಳೆದುಕೊಂಡು, ತಂದೆಯ ಆಸರೆಯಲ್ಲಿ ಬೆಳೆದ ಹುಡುಗಿ ಅನು. ತಾಯಿ ಪ್ರೀತಿ ಕಾಣದ ಈ ಹುಡುಗಿಗೆ ಯಾರ ಬಳಿ ಹೇಗೆ ಪ್ರೀತಿ ವ್ಯಕ್ತಪಡಿಸಬೇಕೆಂದು ತಿಳಿದಿರುವುದಿಲ್ಲ.ಪಾತ್ರಕ್ಕೆ ಮಾತು ಕಡಿಮೆ. ಕಣ್ಣಿನಲ್ಲೇ ಭಾವನೆ ಹೇಳುವ ಹಾಗೂ ಗುಂಗುರು ಕೂದಲುಳ್ಳ ಸಹಜ ಸುಂದರಿಯಂತೆ ಕಾಣುವ ಪಾತ್ರವಿದು ಎಂದು ನಿರ್ದೇಶಕ ಪಿ.ಸಿ ಶೇಖರ್ ತಿಳಿಸಿದ್ದಾರೆ.
ಅಪೂರ್ವ ಅದ್ಭುತವಾಗಿ ಅಭಿನಯಿಸಿದ್ದಾರೆ ಹಾಗೂ ಚಿತ್ರದಲ್ಲಿ ಅವರ ಪಾತ್ರ ಬರುವ ಕಡೆಯೆಲ್ಲಾ ಪಿಂಕ್ ಶೇಡ್ ನಲ್ಲಿ ಚಿತ್ರಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಎಸ್ ಆರ್ ವೆಂಕಟೇಶ್ ಗೌಡ ನಿರ್ಮಾಣದ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದೆ. ಶಕ್ತಿ ಶೇಖರ್ ಛಾಯಾಗ್ರಹಣವಿದೆ.”ಪ್ರೀತಿಯ ರಾಯಭಾರಿ” ಚಿತ್ರದ ಮೂಲಕ ಜನರ ಮನಗೆದ್ದಿರುವ ನಕುಲ್ ಗೌಡ ಚಿತ್ರದಲ್ಲಿ “ಕ್ರೋಧ” ಪ್ರತಿನಿಧಿಸುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮಾನ್ವಿತ ಹರೀಶ್, ಸಾಯಿ ಕೃಷ್ಣ, ಅಪೂರ್ವ ಭಾರದ್ವಾಜ್, ಮಂಜುನಾಥ್ , ಅಶ್ವಿನಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.