(ಸಂಜೆವಾಣಿ ವಾರ್ತೆ)
ಬ್ಯಾಡಗಿ,ಜು.13: ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹ ಮಾಡುವ ಕುತಂತ್ರದ ಮೂಲಕ ಕೇಂದ್ರ ಸರ್ಕಾರ ದ್ವೇಷದ ರಾಜಕೀಯ ಮಾಡುತ್ತಿದೆ ಎಂದು ಬ್ಯಾಡಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಾನಪ್ಪ ಚೂರಿ ಆರೋಪಿಸಿದರು.
ಪಟ್ಟಣದ ಕಾಂಗ್ರೆಸ್ ಭವನದಿಂದ ಹಳೆ ಪುರಸಭೆಯವರೆಗೂ ಕೇಂದ್ರ ಸರ್ಕಾರದ ಕುತಂತ್ರ ರಾಜಕಾರಣದ ವಿರುದ್ಧ ತಾಲೂಕಾ ಕಾಂಗ್ರೆಸ್ ಪಕ್ಷದ ವತಿಯಿಂದ ಮೌನ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ರಾಹುಲ್ ಗಾಂಧಿಯವರ ಸತ್ಯದ ನುಡಿಗಳನ್ನು ಸಹಿಸಿಕೊಳ್ಳದ ಪ್ರಧಾನ ಮಂತ್ರಿಗಳು ಅವರ ಮೇಲೆ ಎಲ್ಲಾ ಸೇಡಿನ ಕ್ರಮಗಳನ್ನು ಅನುಸರಿಸುತ್ತಿದೆ. ಇಂತಹ ದ್ವೇಷದ ಆಡಳಿತ ಮಾಡುವದು ಸರಿಯಲ್ಲ. ಇಂತಹ ನೀತಿ ಅನುಸರಿಸಿದ್ದರಿಂದಲೇ ಕರ್ನಾಟಕದಲ್ಲಿ ಬಿಜೆಪಿಗೆ ಜನತೆಗೆ ತಕ್ಕ ಪಾಠ ಕಲಿಸಿದ್ದಾರೆಂದು ದೂರಿದರು.
ಪ್ರಧಾನ ಕಾರ್ಯದರ್ಶಿ ರಮೇಶ ಸುತ್ತಕೋಟಿ ಮಾತನಾಡಿ, ರಾಹುಲ್‍ಗಾಂಧಿಯವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸುವ ಸಲುವಾಗಿಯೇ ಕೇಂದ್ರ ಸರ್ಕಾರ ಷಡ್ಯಂತ್ರ ರೂಪಿಸಿದೆ. ಅದಾನಿ ಗುಂಪಿನ ಷೇರು ಹಗರಣ ಸೇರಿದಂತೆ ಹಲವಾರು ಅವ್ಯವಹಾರ ಪ್ರಕರಣಗಳ ವಿರುದ್ಧ ರಾಹುಲ್‍ಗಾಂಧಿ ಅವರು ಧ್ವನಿ ಎತ್ತಿದ ಹಿನ್ನೆಲೆಯಲ್ಲಿ ಮುಜುಗರಕ್ಕೀಡಾಗಿರುವ ಕೇಂದ್ರ ಸರ್ಕಾರ ಅವರನ್ನು ಸಂಸದ ಸ್ಥಾನದಿಂದ ದೂರ ಇಡುವ ಸಲುವಾಗಿ ಹುನ್ನಾರ ನಡೆಸಲಾಗಿದೆ ಎಂದು ಆಪಾದಿಸಿದರು.
ಈ ಸಂದರ್ಭದಲ್ಲಿ ಕಾಗಿನೆಲೆ ಬ್ಲಾಕ್ ಅಧ್ಯಕ್ಷ ಶಿವನಗೌಡ ಪಾಟೀಲ, ಮಲ್ಲಿಕಾರ್ಜುನ ಕರಲಿಂಗಣ್ಣನವರ, ಸುರೇಶ ಹುಳುಬುತ್ತಿ, ಗಿರೀಶ ಇಂಡಿಮಠ, ಶಂಕ್ರಗೌಡ ಪಾಟೀಲ, ಮಾರುತಿ ಅಚ್ಚಿಗೇರಿ, ನಾಗರಾಜ ಆನ್ವೇರಿ, ಮಂಜುನಾಥ ಭೋವಿ, ರಾಜು ಶಿಗ್ಲಿ, ರಾಜೇಸಾಬ ಕಳ್ಯಾಳ, ಶಿವಪ್ಪ ಅಂಬಲಿ, ಪ್ರಕಾಶ ಬಣಕಾರ, ಖಾದರಸಾಬ ದೊಡ್ಮನಿ, ಮಂಜನಗೌಡ ಲಿಂಗನಗೌಡ್ರ, ಕಾಂತೇಶ ಕರಲಿಂಗಣ್ಣನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.