ಬ್ಯಾಡಗಿ ತಳಿ ಚಿಲ್ಲಿಗೆ ಭಾರಿ ಡಿಮಾಂಡ್

ಕೃಷಿಕರ ಕೈಹಿಡಿದ ಮೆಣಸಿನಕಾಯಿ ಬೆಳೆ ಕ್ವಿಂಟಾಲ್‌ಗೆ ೧೨-೧೫ಸಾವಿರ ರೂ. ಬೆಲೆ
ದೇವದುರ್ಗ.ಏ.೦೪-ಸತತ ಮಳೆ ಹಾಗೂ ಕೃಷ್ಣಾ ನದಿ ನೆರೆಹಾವಳಿಯಿಂತ ತತ್ತರಿಸಿದ್ದ ತಾಲೂಕಿನ ರೈತರಿಗೆ ಮೆಣಸಿನಕಾಯಿ ಬೆಳೆಗೆ ಉತ್ತಮ ಬೆಲೆ ಸಿಕ್ಕಿರುವುದು ನೆಮ್ಮದಿ ತಂದಿದೆ. ಉತ್ತಮ ಬಣ್ಣ, ಉತ್ಕೃಷ್ಟ ತಳಿ ಹೊಂದಿದ ತಾಲೂಕಿನ ಮಿರ್ಚಿಗೆ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆಯಿದೆ.
ನಾರಾಯಣಪುರ ಬಲದಂಡೆ ನಾಲೆ ಹಾಗೂ ಕೃಷ್ಣಾ ನದಿ ನೀರಿನಿಂದ ೪ಹೋಬಳಿಯಲ್ಲಿ ಸುಮಾರು ೨೦ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯಲಾಗಿದೆ. ಆಗಸ್ಟ್, ಸೆಪ್ಟೆಂಬರ್‌ನಲ್ಲಿ ಬೆಂಬಿಡದೆ ಸುರಿದ ಮಳೆಯಿಂದ ಬೆಳೆಗಳ ಬೆಳವಣಿಗೆ ಕುಂಠಿತವಾದರೂ ಉತ್ತಮ ಬೆಲೆ ರೈತರ ಕೈಹಿಡಿದೆ.
ಬಹುತೇಕ ರೈತರು ವಾಣಿಜ್ಯ ಬೆಳೆಗೆ ಜೋತು ಬಿದ್ದಿದ್ದು, ಭತ್ತ, ಹತ್ತಿ, ಮೆಣಸಿನಕಾಯಿ ಸಿಂಹಪಾಲು ಪಡೆದಿವೆ. ಭತ್ತ ಉತ್ತಮವಿದ್ದು, ಹತ್ತಿ ಬೆಳೆದ ರೈತರು ಅತಿಯಾದ ಮಳೆಯಿಂದ ಬೆಳೆಯಲ್ಲಿ ನೀರುನಿಂತು ತೇವಾಂಶ ಹೆಚ್ಚಳದಿಂದ ಬೆಳೆ ಕೊಳೆತಿವೆ. ಭತ್ತ, ಮೆಣಸಿನಕಾಯಿಗೆ ಯಾವುದೇ ಹಾನಿಯಾಗದಿದ್ದರೂ ಚಿಲ್ಲಿ ಬೆಳವಣಿಗೆ ಕುಂಠಿತಗೊಂಡಿತ್ತು. ಅಲ್ಲದೆ ಹೂವು, ಕಾಯಿ ಉದುರಿದ್ದವು.
ಹತ್ತಿ ತೆಗೆದು ಹೈಬ್ರಿಡ್ ಸಜ್ಜೆ, ಜೋಳ ಬಿತ್ತನೆ ಮಾಡಲಾಗಿತ್ತು. ಕೃಷಿ ವಿಜ್ಞಾನಿಗಳ ಸಲಹೆ ಪಡೆದು ಮೆಣಸಿನಕಾಯಿ ಬೆಳೆಗೆ ತೇವಾಂಶ ನಿಯಂತ್ರಿಸಿ ಬೆಳೆ ಉಳಿಸಿಕೊಳ್ಳಲಾಗಿತ್ತು. ಈಗ ಇದೇ ಬೆಳೆ ರೈತರ ಕೈಹಿಡಿದಿದ್ದು, ಅಧಿಕ ಲಾಭ ತಂದಿದೆ. ಜಾಲಹಳ್ಳಿ, ದೇವದುರ್ಗ ಹೋಬಳಿ ಹಾಗೂ ನದಿದಂಡೆ ಗ್ರಾಮಗಳಲ್ಲಿ ಹೆಚ್ಚಾಗಿ ಮೆಣಸಿನಕಾಯಿ ಬೆಳೆಯಲಾಗಿದೆ. ಬ್ಯಾಡಗಿ ಮೆಣಸಿನಕಾಯಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ.
ನೆಮ್ಮದಿ ತಂದ ಬೆಲೆ
ವಾಣಿಜ್ಯ ಬೆಳೆಗಳಾದ ಭತ್ತ, ಹತ್ತಿ, ಮೆಣಸಿನಕಾಯಿಗೆ ಅಧಿಕ ಖರ್ಚು ಬರುತ್ತದೆ. ಮೆಣಸಿನಕಾಯಿ ಉತ್ತಮ ಇಳುವರಿ ಜತೆಗೆ ಉತ್ತಮ ಬೆಲೆಯೂ ಇದೆ. ಇದು ಭತ್ತ, ಹತ್ತಿಗಿಂತ ಹೆಚ್ಚಿನ ಅನುಕೂಲವಾಗಿದೆ. ಕಪ್ಪು ಭೂಮಿಯಲ್ಲಿ ಈ ಬೆಳೆ ಉತ್ತಮವಾಗಿ ಬೆಳೆಯುತ್ತಿದ್ದು, ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್‌ಗೆ ೧೨-೧೫ಸಾವಿರ ರೂ. ಬೆಲೆಯಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ, ಶೇ.೧೦ ಬೆಲೆ ಜಾಸ್ತಿಯಿದೆ. ಬೀಜ, ಕ್ರಿಮಿನಾಶಕ, ಗೊಬ್ಬರ, ಕೂಲಿಹಾಳು ಸೇರಿ ಪ್ರತಿಎಕರೆ ೮೦-೮೫ಸಾವಿರ ರೂ.ವರೆಗೆ ಖರ್ಚು ಮಾಡಿದ್ದು, ಉತ್ತಮ ಕಾಳಜಿ ಮಾಡಿದರೆ ಎಕರೆಗೆ ೧೫-೧೮ಕ್ವಿಂಟಾಲ್ ಬೆಳೆ ಬರುತ್ತಿದೆ. ಅಲ್ಲದೆ ಹತ್ತಿಯಂತೆ ಅತಿಯಾದ ರೋಗ, ಭತ್ತದಂತೆ ಅತಿಯಾದ ನೀರಿನ ಬಳಕೆ ಕೂಡ ಇರುವುದಿಲ್ಲ. ಹೀಗಾಗಿ ಮೆಣಸಿನಕಾಯಿ ಬೆಳೆ ರೈತರಿಗೆ ಅನುಕೂಲವಾಗಿದೆ.

ಐದು ಎಕರೆಯಲ್ಲಿ ಬ್ಯಾಡಗಿ ಮೆಣಸಿನಕಾಯಿ ಬಿತ್ತನೆ ಮಾಡಿದ್ದು, ಉತ್ತಮ ಇಳುವರಿ ಬಂದಿದೆ. ಎಕರೆಗೆ ೮೫-೯೦ ಸಾವಿರ ರೂ. ಖರ್ಚು ಮಾಡಿದ್ದು, ಎಕರೆ ೧೮ಕ್ವಿಂಟಾಲ್ ಬೆಳೆ ಬಂದಿದೆ. ಅತಿಯಾದ ಮಳೆಯಿಂದ ಬೆಳವಣಿಗೆ ಕುಂಠಿತವಾಗಿತ್ತು. ಉತ್ತಮ ಬೆಲೆ ಇರುವ ಕಾರಣ ಸ್ವಲ್ಪ ಮಟ್ಟಿನ ಲಾಭವಾಗುತ್ತಿದೆ.
ಬಸವರಾಜ, ಶಿವಪ್ಪ
ಮೆಣಸಿನಕಾಯಿ ಬೆಳೆದ ರೈತರು