ಬ್ಯಾಡಗಿ ಅಭಿವೃದ್ಧಿಗೆ ಅನುದಾನ ನೀಡುವಂತೆ ಮನವಿ

ಬ್ಯಾಡಗಿ, ಜ7- ರಾಜ್ಯ ಸರ್ಕಾರದಿಂದ ಪಟ್ಟಣದ ಸಮಗ್ರ ಅಭಿವೃದ್ಧಿಗೆ 15 ಕೋಟಿ ರೂಗಳ ವಿಶೇಷ ಅನುದಾನವನ್ನು ಒದಗಿಸಲು ಕ್ರಮ ವಹಿಸುವಂತೆ ಪುರಸಭೆಯ ಸದಸ್ಯರು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರಿಗೆ ಮನವಿ ಮಾಡಿದ್ದಾರೆ.
ತಾಲೂಕಿನ ಮೋಟೆಬೆನ್ನೂರ ಗ್ರಾಮದಲ್ಲಿರುವ ಶಾಸಕರ ನಿವಾಸಕ್ಕೆ ಪುರಸಭೆಯ ಸದಸ್ಯರ ಜೊತೆಗೂಡಿ ತೆರಳಿ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿದ ಪುರಸಭೆಯ ಅಧ್ಯಕ್ಷೆ ಕವಿತಾ ಸೊಪ್ಪಿನಮಠ ಅವರು, ಪಟ್ಟಣದಲ್ಲಿ ಯುಜಿಡಿ ಕಾಮಗಾರಿಗಳು ನಡೆಯುವ ಹಂತದಲ್ಲಿ ರಸ್ತೆ, ಕಾಲುವೆಗಳು ಸಂಪೂರ್ಣ ಹಾಳಾಗಿದ್ದು, ಇದರಿಂದ ಸಾರ್ವಜನಿಕರು ಬಹಳಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ವಾರ್ಡಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಅನುದಾನ ಕೊರತೆಯಿದ್ದು, ಪ್ರಸಕ್ತ ಸಾಲಿನಲ್ಲಿ ಪಟ್ಟಣದ ಅಭಿವೃದ್ಧಿಗೆ 15 ಕೋಟಿ ರೂಗಳ ಕ್ರಿಯಾ ಯೋಜನೆಯನ್ನು ಸಿದ್ಧ ಪಡಿಸಲಾಗಿದೆ. ಶಾಸಕರು ಅಭಿವೃದ್ದಿಯ ದೃಷ್ಟಿಯಿಂದ ಪುರಸಭೆಗೆ ಹೆಚ್ಚಿನ ಅನುದಾನ ಸಿಗುವಂತೆ ಕ್ರಮ ವಹಿಸುವಂತೆ ಒತ್ತಾಯಿಸಿದರು.
ಪುರಸಭಾ ಉಪಾಧ್ಯಕ್ಷೆ ಕಲಾವತಿ ಬಡಿಗೇರ ಮಾತನಾಡಿ, ಮಲ್ಲೂರು ರಸ್ತೆಯಲ್ಲಿ ನಿವೇಶನ ಹಂಚಿಕೆಗಾಗಿ ಪುರಸಭೆಯಿಂದ ಈಗಾಗಲೇ 10 ಎಕರೆ ಜಮೀನನ್ನು ಖರೀದಿಸಿದ್ದರೂ ಸಹ ಈವರೆಗೂ ಅರ್ಹ ಫಲಾನುಭವಿಗಳಿಗೆ ನಿವೇಶನ ಮಾಡದೇ ಇರುವುದರಿಂದ ಬಡ ಜನರಿಗೆ ಬಹಳಷ್ಟು ತೊಂದರೆಯಾಗಿದೆ. ಕೂಡಲೇ ಆಶ್ರಯ ಸಮಿತಿ ಸಭೆಯನ್ನು ಕರೆದು ಹಲವಾರು ವರ್ಷಗಳಿಂದ ನಿವೇಶನಕ್ಕಾಗಿ ಕಾಯುತ್ತಿರುವ ಬಡನಿರ್ಗತಿಕ ಜನರಿಗೆ ನಿವೇಶನವನ್ನು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಬಸವಣ್ಣೆಪ್ಪ ಛತ್ರದ, ರಾಮಣ್ಣ ಕೋಡಿಹಳ್ಳಿ, ಫಕ್ಕೀರಮ್ಮ ಚಲುವಾದಿ, ವಿನಯ ಹಿರೇಮಠ, ಗಾಯತ್ರಿ ರಾಯ್ಕರ, ಸರೋಜಾ ಉಳ್ಳಾಗಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.