ಬ್ಯಾಡಗಿಯಲ್ಲಿ ಶೇ. 82.32 ಮತದಾನ

ಬ್ಯಾಡಗಿ, ಡಿ 28- ತಾಲೂಕಿನ 18 ಗ್ರಾಮ ಪಂಚಾಯತಿಗಳಿಗೆ ನಿನ್ನೆ ನಡೆದ ಚುನಾವಣೆಯಲ್ಲಿ 87.32 ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿ ತಹಶೀಲ್ದಾರ ರವಿಕುಮಾರ ಕೊರವರ ತಿಳಿಸಿದ್ದಾರೆ.

ಬೆಳಿಗ್ಗೆ 7 ಗಂಟೆಯಿಂದಲೇ ಮಂದಗತಿಯಿಂದ ನಡೆದ ಮತದಾನ 11ಗಂಟೆಯ ನಂತರ ಚುರುಕಿನಿಂದ ಸಾಗಿತು. ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಶೇ.22ರಷ್ಟು, ಮಧ್ಯಾಹ್ನ 1 ಗಂಟೆಗೆ ಶೇ. 47 ಹಾಗೂ 3ಗಂಟೆಯ ಹೊತ್ತಿಗೆ ಶೇ.64 ರಷ್ಟಾಗಿದ್ದ ಮತದಾನ ಕೊನೆಯ ಅವಧಿಯು ಮುಗಿಯುವ ವೇಳೆಗೆ ಶೇ. 87.32 ರಷ್ಟಾಗಿತ್ತು. ಜಿಲ್ಲಾ ವೀಕ್ಷಕ ನಾಗೇಂದ್ರ ಹೊನ್ನಾಳಿ, ಹಾವೇರಿ ಉಪ ವಿಭಾಗಾಧಿಕಾರಿ ದಿಲಿಷ್ ಶಶಿ, ತಹಶೀಲ್ದಾರ ರವಿಕುಮಾರ ಕೊರವರ ಸೇರಿದಂತೆ ವಿವಿಧ ಅಧಿಕಾರಿಗಳು ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲೂಕಿನ 21 ಗ್ರಾಮ ಪಂಚಾಯತಿಗಳ ಪೈಕಿ 18 ಗ್ರಾಮ ಪಂಚಾಯತಿಗಳಿಗೆ ಕೋವಿಡ್ -19ರ ನಿಯಮಾನುಸಾರ ನಡೆದ ಚುನಾವಣೆಯಲ್ಲಿ ಎಲ್ಲ ಮತಗಟ್ಟೆಗಳಲ್ಲಿ ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನಿಂಗ್ ಮಾಡುವ ವ್ಯವಸ್ಥೆಯನ್ನು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಕಲ್ಪಿಸಲಾಗಿತ್ತು. ಮತದಾರರು ಉತ್ಸಾಹದಿಂದಲೇ ತಮ್ಮ ಮತವನ್ನು ಚಲಾಯಿಸುವ ಮೂಲಕ ಸದಸ್ಯರ ಆಯ್ಕೆಗೆ ನಾಂದಿ ಹಾಡಿದ್ದು, 30 ರಂದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.