ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಜು.16: ತಾಲೂಕಿನ ವಿವಿಧ ಶಾಲೆಗಳಲ್ಲಿ ಶನಿವಾರ ಬ್ಯಾಗ್ ರಹಿತ ಚಿಣ್ಣರು ಸಂಭ್ರಮದಿಂದ ಕಳೆದರು.
ಪ್ರತಿ ತಿಂಗಳ 3ನೇ ಶನಿವಾರವನ್ನು ಬ್ಯಾಗ್ ರಹಿತ ದಿನವನ್ನಾಗಿ ಸರ್ಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ಶಾಲೆಯ ವಿದ್ಯಾರ್ಥಿಗಳು ಈ ದಿನವನ್ನು ಸಂಭ್ರಮದಿಂದ ಆಚರಿಸಿದರು.
ತಾಲೂಕಿನ ಪ್ರಾಥಮಿಕ, ಪ್ರೌಢಶಾಲೆಗಳ ವಿದ್ಯಾರ್ಥಿಗಳು ಇಂದು ಬ್ಯಾಗ್ ರಹಿತವಾಗಿ ಶಾಲೆಗೆ ಬಂದು ಆಟೋಟಗಳಲ್ಲಿ ಪಾಲ್ಗೊಂಡರು.
ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯಲ್ಲಿ ‘ಸಂಭ್ರಮ ಶನಿವಾರ’ ವನ್ನು ದೈಹಿಕ ಶಿಕ್ಷಕ ಆರ್. ಸ್ವಾಮಿನಾಥ ವಿಶೇಷವಾಗಿ ಸಂಘಟಿಸಿದ್ದರು. ಶಾಲೆಯ ವಿದ್ಯಾರ್ಥಿಗಳು ಗಾಳಿಪಟ ಹಾರಿಸುವುದು, ಕುಂಟಾಬಿಲ್ಲೆ ಲಗೋರಿ ಹಗ್ಗ ಜಗ್ಗಾಟ, ಸ್ಕಿಪ್ಪಿಂಗ್ ಹೀಗೆ ಹಲವಾರು ವೈವಿಧ್ಯಮಯ ಆಟಗಳನ್ನು ಆಡಿದರು. ಗೀತೆಗಳನ್ನು ಸಾಮೂಹಿಕ ಹಾಡಿದರು.
ಚಿತ್ರಕಲಾ ಶಿಕ್ಷಕರಾದ ದ್ವಾರಕೀಶ್ ರೆಡ್ಡಿ, ಮುಖ್ಯ ಶಿಕ್ಷಕ ಸುರೇಶ ಅಂಗಡಿ ಸೇರಿದಂತೆ ಉಳಿದ ಶಿಕ್ಷಕರು ಸಹಕರಿಸಿದರು.