ಬ್ಯಾಗ್‌ನಲ್ಲಿ ಬಾಂಬ್; ವಿಸ್ತಾರ ವಿಮಾನ ಹಾರಾಟ ವಿಳಂಬ

ನವದೆಹಲಿ,ಜೂ.೯-ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಹ ಪ್ರಯಾಣಿಕರೊಬ್ಬರು ತನ್ನ ಬ್ಯಾಗ್‌ನಲ್ಲಿ ಬಾಂಬ್ ಇರುವ ಬಗ್ಗೆ ಮಾತನಾಡಿದ ಹಿನ್ನಲೆಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ವಿಸ್ತಾರ ಏರ್‌ಲೈನ್ಸ್ ವಿಮಾನ ಹಾರಾಟದಲ್ಲಿ ವಿಳಂಬವಾಗಿತ್ತು.
ಸಹ ಪ್ರಯಾಣಿಕರೊಬ್ಬರು ತನ್ನ ಬ್ಯಾಗ್‌ನಲ್ಲಿ ಬಾಂಬ್ ಇರುವ ಬಗ್ಗೆ ಮಾತನಾಡಿದ್ದನ್ನು
ಕೇಳಿಸಿಕೊಂಡಿರುವುದಾಗಿ ಪ್ರಯಾಣಿಕರೊಬ್ಬರು ಹೇಳಿದ ಕೂಡಲೇ ವಿಮಾನ ಹಾರಾಟವನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಅದು ಹುಸಿ ಮಾಹಿತಿ ಎನ್ನುವುದು ಗೊತ್ತಾಗಿ ಮತ್ತೆ ವಿಮಾನದ ಹಾರಾಟವನ್ನು ಎರಡು ಗಂಟೆಗಳು ತಡವಾಗಿ ನಡೆಸಲಾಯಿತು.
ಕಳೆದ ಜೂ. ೭ರಂದು ೪-೫೫ಕ್ಕೆ ನಿರ್ಗಮಿಸಬೇಕಾಗಿದ್ದ ದೆಹಲಿ- ಮುಂಬೈ ನಡುವಿನ ವಿಮಾನ ಸಂಖ್ಯೆ ಯುಕೆ-೯೪೧ರಲ್ಲಿ ಇಂತಹ ಬೆದರಿಕೆ ಕಂಡುಬಂದ ನಂತರ ನಿಲ್ದಾಣದಲ್ಲಿನ ಬಹು ಭದ್ರತೆ, ಗುಪ್ತಚರ, ವಿಮಾನ ನಿಲ್ದಾಣ ಕಾರ್ಯಾಚರಣೆಗಳು ಮತ್ತು ವಾಯುಯಾನ ಏಜೆನ್ಸಿಯ ಸಮಿತಿ ಸಭೆ ಸುಮಾರು ಸಂಜೆ ೬-೧೦ರ ವೇಳೆಗೆ ನಡೆದಿತ್ತು.
ಬ್ಯಾಗ್ ನಲ್ಲಿರುವ ಬಾಂಬ್ ನ್ನು ಸಿಐಎಸ್ ಎಫ್ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ ಎಂದು ಪುರುಷ ಪ್ರಯಾಣಿಕರೊಬ್ಬರು ಫೋನ್‌ನಲ್ಲಿ ಹೇಳುತ್ತಿದ್ದನ್ನು ಕೇಳಿಸಿಕೊಂಡಿದ್ದಾಗಿ ಮಹಿಳಾ ಪ್ರಯಾಣಿಕರೊಬ್ಬರು ವಿಮಾನದ ಸಿಬ್ಬಂದಿ ವರದಿ ಮಾಡಿದ್ದಾಗಿ ಮೂಲಗಳು ತಿಳಿಸಿವೆ. ದೇಶದಲ್ಲಿನ ೬೬ ನಾಗರಿಕ ವಿಮಾನ ನಿಲ್ದಾಣಗಳಿಗೆ ಬೆದರಿಕೆ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಪ್ರಯಾಣಿಕರು ಮತ್ತು ಅವರ ಲಗ್ಗೇಜ್ ನ್ನು ತಪಾಸಣೆ ಮಾಡುತ್ತಾರೆ.
ವಿಮಾನದಲ್ಲಿದ್ದ ಸಿಬ್ಬಂದಿ ಕೂಡಲೇ ಭದ್ರತಾ ಸಿಬ್ಬಂದಿ ಮತ್ತು ಸಿಐಎಸ್‌ಎಫ್ ಪಡೆಗೆ ಮಾಹಿತಿ ನೀಡಿದ್ದರಿಂದ ವಿಮಾನದ ಟೇಕಾಫ್ ಎರಡು ಗಂಟೆ ವಿಳಂಬವಾಗಿದೆ. ನಂತರ ವಿಧ್ವಂಸಕ ನಿಗ್ರಹ ಪಡೆ ಎಲ್ಲಾ ಪ್ರಯಾಣಿಕರ ಬ್ಯಾಗ್‌ನ್ನು ತಪಾಸಣೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.